
ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪಿಎಂ ಕಸುಮ್-ಬಿ ಯೋಜನೆಯಡಿ ವಿದ್ಯುತ್ ಜಾಲದಿಂದ ಕೃಷಿ ಪಂಪ್ ಸೆಟ್ಗಳ ಮಧ್ಯದ ಅಂತರವನ್ನು ಪರಿಗಣಿಸದೇ, ಎಲ್ಲಾ ಪಂಪ್ಸೆಟ್ಗಳಿಗೆ ವೆಚ್ಚದ 50%ರಷ್ಟನ್ನು ರಾಜ್ಯ ಸರ್ಕಾರವೇ ಭರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
PM KUSUM-B ಯೋಜನೆಯಡಿ Stand-alone / off Grid Solar Pump ಸ್ಥಾಪನೆಗೆ ಹಿಂದಿನ ಸರ್ಕಾರಿ ಆದೇಶದ ಮಾರ್ಪಾಡು ಮಾಡುವ ಬಗ್ಗೆ- ವಿದ್ಯುತ್ ಜಾಲದಿಂದ ಪಂಪ್ ಸೆಟ್ ಇರುವ ದೂರವನ್ನು ಲೆಕ್ಕಿಸದೆ, ಕಾರ್ಯಗತಗೊಳಿಸಲಾದ ಪಂಪ್ ಸೆಟ್ಗಳ ವೆಚ್ಚದಲ್ಲಿ ಶೇ.50ರಷ್ಟು ರಾಜ್ಯ ಸರ್ಕಾರದ ಸಹಾಯಧನ ಆಗಿರಬೇಕು ಎಂದು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಮಾರಾಟ ಮಳಿಗೆಯಲ್ಲಿ ಬಯೋ ಡೀಸೆಲ್ ಮಾರಾಟಕ್ಕೆ ಒಪ್ಪಿಗೆ: ಕರ್ನಾಟಕ ರಾಜ್ಯ ಬಯೋ ಡೀಸೆಲ್ (B-100) ಹೈ ಸ್ಪೀಡ್ ಡೀಸೆಲ್‌ನೊಂದಿಗೆ ಮಿಶ್ರಣ ಮಾಡುವ (ಪರವಾನಗಿ) ಆದೇಶ 2025ಕ್ಕೆ ಅನುಮೋದನೆ ನೀಡಲಾಗಿದೆ. ಆ ಮೂಲಕ ಮಾರಾಟ ಮಳಿಗೆಯಲ್ಲಿ ಬಯೋ ಡೀಸೆಲ್ ಮಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ.
ಖಾದ್ಯವಲ್ಲದ ಸಸ್ಯಜನ್ಯ ಎಣ್ಣೆಗಳು, ಆಮ್ಲ ತೈಲ, ಬಳಸಿದ ಅಡುಗೆ ಎಣ್ಣೆ ಅಥವಾ ಪ್ರಾಣಿಗಳ ಕೊಬ್ಬು ಮತ್ತು ಜೈವಿಕ ಎಣ್ಣೆಯಿಂದ ಉತ್ಪತ್ತಿಯಾಗುವ ಕೊಬ್ಬಿನಾಮ್ಲಗಳಿಂದ ಬಯೋ ಡೀಸೆಲ್‌ನ್ನು ತಯಾರಿಸಲು ಅವಕಾಶವಿದೆ. ಈ ರೀತಿ ಉತ್ಪಾದಿಸಲಾದ ಬಯೋ ಡೀಸೆಲ್‌ನ್ನು ಶೇ.7ರಷ್ಟು ಪ್ರಮಾಣದಲ್ಲಿ ಡೀಸೆಲ್‌ನೊಂದಿಗೆ ಬೆರೆಸಿ ಮಾರಾಟ ಮಾಡಲು ಅವಕಾಶವಿದೆ. ಪ್ರಸ್ತುತ ಬಯೋ ಡೀಸೆಲ್ ಲಭ್ಯವಿಲ್ಲದೇ ಇರುವುದರಿಂದ, ಡೀಸೆಲ್‌ನೊಂದಿಗೆ ಬಯೋ ಡೀಸೆಲ್‌ನ್ನು ಮಾರಾಟ ಮಾಡಲಾಗುತ್ತಿಲ್ಲ. ಆದರೆ, ಬಯೋ ಡೀಸೆಲ್ ಲಭ್ಯತೆ ಇಲ್ಲದೇ ಇರುವುದರಿಂದ, ಮಾರಾಟ ಮಳಿಗೆಗಳಲ್ಲಿ ಬಯೋ ಡೀಸೆಲ್ ಮಿಶ್ರಿತ ಡೀಸೆಲ್‌ನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಬಯೋ ಡೀಸೆಲ್ ಹೆಸರಿನಲ್ಲಿ ಇತರೆ ರಾಸಾಯನಿಕಗಳನ್ನು ಮಾರಾಟ ಮಾಡಲಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೆರೆಯಲಾಗಿದ್ದ 14 ಬಯೋ ಡೀಸೆಲ್ ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲಾಗಿದೆ ಎಂದು ಸಚಿವರು ವಿವರಿಸಿದರು.
ಉಪಯೋಗಿಸಿದ ಅಡುಗೆ ಎಣ್ಣೆಯನ್ನು (Used Cooking Oil) ಬೀದಿ ಬದಿ ವ್ಯಾಪಾರಿಗಳು ಪುನರ್ ಬಳಕೆ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯ ಹದಗೆಡುತ್ತಿದೆ. ಅನೇಕ ಆರೋಗ್ಯ ಸಮಸ್ಯೆಗಳು ತಲೆದೋರಿ ದೇಶದ ಬೆಳವಣಿಗೆಗೆ ಸಹ ಅಡ್ಡಿವುಂಟಾಗುತ್ತದೆ. ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಬಯೋ ಡಿಸೇಲ್‌ಗೆ ಬಳಸುವುದರಿಂದ ಸಾರ್ವಜನಿಕರಿಗೆ ಉಂಟಾಗುವ ಅಪಾಯ ತಪ್ಪಿಸಬಹುದಾಗಿದೆ. ಕೇಂದ್ರ ಸರ್ಕಾರ 30.04.2019ರಂದು ಹೊರಡಿಸಿರುವ ಅಧಿಸೂಚನೆಯಲ್ಲಿನ ಮಾರ್ಗಸೂಚಿಗಳನ್ವಯ ರಾಜ್ಯದಲ್ಲಿ ಕಾನೂನಾತ್ಮಕವಾಗಿ ಬಯೋ ಡೀಸೆಲ್ ಮಾರಾಟಕ್ಕಾಗಿ Retall outletಗಳನ್ನು ಸ್ಥಾಪಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿಯೂ The Bio-Diesel (B-100) Blending with High Speed Diesel for Transportation Purposes (Licensing) order, 2022 ಜಾರಿಗೊಳಿಸಲು ಒಪ್ಪಿಗೆ ನೀಡಲಾಗಿದೆ ಎಂದರು.
ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 2025ಕ್ಕೆ ಅನುಮೋದನೆ: ”ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದಪಡಿ) ನಿಯಮಗಳು, 2025”ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ರೈತರಿಗೆ ಹಾಗೂ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಉಪಖನಿಜ ಲಭ್ಯತೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಭೂಮಿಯನ್ನು ಸಮತಟ್ಟು ಮಾಡಲು, ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಲು, ಕೆರೆಗಳಲ್ಲಿ ಹೂಳು ತೆಗೆಯಲು ಕೃಷಿ ಮತ್ತು ಮೀನುಗಾರಿಕೆ ಹೊಂಡಗಳ ನಿರ್ಮಾಣ ಕಾರ್ಯಗಳಲ್ಲಿ ದೊರೆಯುವ ಉಪಖನಿಜಗಳನ್ನು ಬಳಕೆ ಮಾಡಿದ ನಂತರ ಸಾಗಾಣಿಕೆ ಮಾಡುವ ಸಮಯದಲ್ಲಿ ಪಾವತಿಸಬೇಕಾದ ಹೆಚ್ಚುವರಿ ಪಾವತಿ, ರಾಜಧನ ಮುಂತಾದವುಗಳ ಪಾವತಿಸಿಕೊಂಡು ನೀಡುತ್ತಿರುವ ಪರವಾನಿಗೆಗಳಲ್ಲಿ ಶುಲ್ಕ ಸೋರಿಕೆಯಾಗದಂತೆ ತಡೆಗಟ್ಟಲು ನಿಯಮಗಳನ್ನು ಸರಳೀಕರಣಗೊಳಿಸಲು ಪ್ರಸ್ತಾಪಿಸಲಾಗಿದೆ.
ಶಿಷ್ಟಾಚಾರದ ಬಗ್ಗೆ ಪರಿಷ್ಕೃತ ಮಾರ್ಗಸೂಚಿ: ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಆಹ್ವಾನ ಪತ್ರಿಕೆ ಮತ್ತು ವೇದಿಕೆ ಮೇಲೆ ಆಸೀನರಾಗುವ ಗಣ್ಯರು ಸೇರಿದಂತೆ, ವಿವಿಧ ಶಿಷ್ಟಾಚಾರದ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲು ಸಚಿವ ಸಂಪುಟ ಅನುಮೋದಿಸಿದೆ.
ಆಹ್ವಾನ ಪತ್ರಿಕೆ ಮತ್ತು ವೇದಿಕೆ ಮೇಲೆ ಆಸೀನರಾಗುವ ಗಣ್ಯರ ಹೆಸರುಗಳನ್ನು ಇಲಾಖಾ ಸಚಿವರು 9 ಅಥವಾ 9ಕ್ಕೆ ಮೀರದಂತೆ, ಅನಿವಾರ್ಯ ಸಂದರ್ಭದಲ್ಲಿ 13ಕ್ಕೆ ಮೀರದಂತೆ ಆಯ್ಕೆ ಮಾಡಲು ಅವಕಾಶ ಕಲ್ಪಿಸಿದೆ. ಈ ಹೆಸರುಗಳಲ್ಲಿ ಸ್ಥಳೀಯ ಶಾಸಕರುಗಳು ಮತ್ತು ಸಂಸದರನ್ನು ಕಡ್ಡಾಯವಾಗಿ ಸೇರಿಸಲು ಅವಕಾಶವಿದೆ. ಇನ್ನುಮುಂದೆ ಹೊಸ ಮಾರ್ಗಸೂಚಿಗಳ ಪ್ರಕಾರ, ಜಿಲ್ಲಾಮಟ್ಟದ ಕಾರ್ಯಕ್ರಮಗಳಿಗೆ ಆಹ್ವಾನಿತ ಗಣ್ಯರ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ತಾಲೂಕುಮಟ್ಟದ ಕಾರ್ಯಕ್ರಮಗಳಿಗೆ ಸ್ಥಳೀಯ ಶಾಸಕರು ಹಾಗೂ ರಾಜ್ಯಮಟ್ಟದ ಕಾರ್ಯಕ್ರಮಗಳಿಗೆ ಯಾವ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ ಮಾಡುವುದೋ, ಆ ಇಲಾಖೆಯ ಸಚಿವರು ಅಂತಿಮಗೊಳಿಸಲು ಅವಕಾಶ ಕಲ್ಪಿಸಿದೆ. ಯಾವುದೇ ಸಂದರ್ಭದಲ್ಲಿ 13ಕ್ಕೂ ಹೆಚ್ಚು ಗಣ್ಯರು ವೇದಿಕೆ ಮೇಲೆ ಆಸೀನರಾಗಲು ಅವಕಾಶವಿಲ್ಲ.
ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ಸಂಪುಟ ಉಪಸಮಿತಿ: ಹೊರಗುತ್ತಿಗೆ ನೌಕರರನ್ನು ಖಾಸಗಿ ಏಜೆನ್ಸಿ ಮೂಲಕ ಪಡೆಯಲಾಗುತ್ತಿದೆ. ಅದರ ಬದಲು ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ಹೊರಗುತ್ತಿಗೆ ನೌಕರರನ್ನು ಪಡೆಯುವ ಬಗ್ಗೆ ಸಾಧಕ-ಬಾಧಕ ಬಗ್ಗೆ ಪರಿಶೀಲಿಸಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮತ್ತು ನಿಗಮ/ಮಂಡಳಿಗಳಲ್ಲಿ ಲಕ್ಷಾಂತರ ಕೆಲಸಗಾರರು (ನೌಕರರು ಎಂದು ಕರೆಸಲ್ಪಡುವವರು) ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ಮತ್ತು ಇತರ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕುರಿತು ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟದ ಉಪ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ.
ರಾಜ್ಯದ ಎಲ್ಲಾ ಕಾರ್ಮಿಕರ ಹಿತದೃಷ್ಟಿಯಿಂದ ವಿವಿಧ ಇಲಾಖೆಗಳು ಮತ್ತು ಇಲಾಖೆಗಳ ಅಧಿನದಲ್ಲಿರುವ ನಿಗಮ/ಮಂಡಳಿಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಗಳ ಬಗ್ಗೆ ಸೂಕ್ತ ನಿರ್ಣಯ ಸಚಿವ ಸಂಪುಟದ ಉಪಸಮಿತಿ ಕೈಗೊಳ್ಳಲಿದೆ. ಹೊರಗುತ್ತಿಗೆ ನೌಕರರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಅಪಾಯಕಾರಿ ಸೇವೆ ಸಲ್ಲಿಸುವ ನೌಕರರ ಹಿತರಕ್ಷಣೆ ಮಾಡುವ ದೃಷ್ಟಿಯಿಂದ ಸಚಿವ ಸಂಪುಟ ಉಪಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ಇತರ ಪ್ರಮುಖ ತೀರ್ಮಾನಗಳೇನು?:
- ವಿಜಯಪುರ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ವಿಜಯಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿಗಳ ಕೋಟಿಗಳ ಪರಿಷ್ಕೃತ ಅಭಿವೃದ್ಧಿ ಕಾಮಗಾರಿಗಳ ಒಟ್ಟು 618.75 ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಮೊದಲು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಂದ ಯೋಜನೆಯ ಪ್ರಗತಿ ಪರಿಶೀಲನಾ ವರದಿಯನ್ನು ಸಚಿವ ಸಂಪುಟಕ್ಕೆ ನೀಡಲು ಸೂಚನೆ ನೀಡಲಾಗಿದೆ.
- 35 ಸಂಚಾರಿ ಆರೋಗ್ಯ ಘಟಕಗಳ ದುರಸ್ತಿಯನ್ನು ಕೈಗೊಂಡು ಹೊಸದಾಗಿ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ, ಈ ವಾಹನಗಳನ್ನು Connected Health Eco-System ಸಂಚಾರಿ ಆರೋಗ್ಯ ಘಟಕಗಳಾಗಿ 12.25 ಕೋಟಿ ರೂ.ಗಳ ವೆಚ್ಚದಲ್ಲಿ ಪರಿವರ್ತಿಸಲು ಹಾಗೂ 14.70 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ವಾಹನಗಳ ವಾರ್ಷಿಕ ನಿರ್ವಹಣೆ ಮಾಡಲು ಅನುಮೋದನೆ ನೀಡಲಾಗಿದೆ.
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಸುಂಕ ಸಂಗ್ರಹಣೆಯನ್ನು ಹೆಚ್ಚಿಸಲು “Labour Cess Tracking & Monitoring System Software” ಎಂಬ ನೂತನ ತಂತ್ರಾಂಶವನ್ನು 28.19 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಸಚಿವ ಸಂಪುಟ ಮಂಜೂರಾತಿ ನೀಡಿ, ಈ ವೆಚ್ಚದ ಬಗ್ಗೆ ಪುನರ್ ಪರಿಶೀಲನೆ ನಡೆಸಲು ಸೂಚಿಸಲಾಯಿತು.
- ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ 1,000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್ಗಳಿಗೆ ಅವಶ್ಯವಿರುವ ಉಪಕರಣಗಳು, ಪೀಠೋಪಕರಣಗಳನ್ನು 20.05 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ಕ್ಷೇತ್ರಗಳಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿನ ಅತೀ ಹಿಂದುಳಿದ ಕಾಲೋನಿಗಳನ್ನು ಮಾದರಿ ಕಾಲೋನಿಗಳನ್ನಾಗಿ ಅಭಿವೃದ್ಧಿ ಪಡಿಸಲು 398.00 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
- ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-5 ಘಟ್ಟ-1 ರಡಿಯಲ್ಲಿ 467 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು 4,000.00 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ರಸ್ತೆ ನಿರ್ಮಾಣದ ನಂತರ 6ನೇ ವರ್ಷದಲ್ಲಿ ಡಾಂಬರು ಮೇಲ್ಪದರವನ್ನು ಅಳವಡಿಸಲು ಪ್ರಾವಧಾನ ಮಾಡಲಾಗಿರುವ ಅಂಶವನ್ನು ಕೈಬಿಡಲು ಸಚಿವ ಸಂಪುಟ ಒಪ್ಪಲಿಲ್ಲ. ಆದರೆ ಆಯಾ ಕಾಮಗಾರಿಗಳ ಅಡಿಯಲ್ಲಿ ಸ್ಥಳದ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ.
- ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಸಜ್ಜೆಪಾಳ್ಯ ಗ್ರಾಮದಲ್ಲಿರುವ ಸರ್ವೆ ನಂಬರ್ 04ರಲ್ಲಿ ಲಭ್ಯವಿರುವ ಜಮೀನಿನಲ್ಲಿ 5 ಎಕರೆ ಜಮೀನನ್ನು ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಕೇಂದ್ರ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಶ್ರೀ ಮಹರ್ಷಿ ವಾಲ್ಮೀಕಿ ಸೌಧ ನಿರ್ಮಾಣ ಮಾಡಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಒಪ್ಪಿದೆ.
- ಮೆ. ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ ವತಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಘನತ್ಯಾಜ್ಯದ ಪೈಕಿ 300 ಮೆಟ್ರಿಕ್ ಟನ್ ಹಸಿ ತ್ಯಾಜ್ಯವನ್ನು ಪಯೋಗಿಸಿಕೊಂಡು Compressed Bio-Gas Plant ಅನ್ನು ಸ್ಥಾಪಿಸಲು ಹರಳಗುಂಟೆ ಗ್ರಾಮದ (KCDC ಸಂಸ್ಕರಣಾ ಘಟಕ) ಸರ್ವೆ ನಂ: 39, 40, 45 ಮತ್ತು 46ರಲ್ಲಿ ಲಭ್ಯವಿರುವ ಸುಮಾರು 18.00 ಎಕರೆ ಜಾಗವನ್ನು ಸೀಮಿತ ಬಳಕೆಗೋಸ್ಕರ ಮಾತ್ರ (For permissive use only) ಆಧಾರದಲ್ಲಿ 25 ವರ್ಷಗಳ ಅವಧಿಗೆ ಮೆ|| ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ನೀಡಲು ಸರ್ಕಾರಿ ಆದೇಶ ದಿನಾಂಕ: 30.12.2022ನ್ನು ಪರಿಷ್ಕರಿಸಲು ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೈರಮಂಗಲ ಕೆರೆಯ ದಡದಲ್ಲಿ 100 ದಶಲಕ್ಷ ಲೀಟರ್ ಸಾಮರ್ಥ್ಯದ ದ್ವಿತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ಹಾಗೂ 25 ದಶಲಕ್ಷ ಲೀಟರ್ ಸಾಮರ್ಥ್ಯದ ತೃತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿ ಮತ್ತು ಈ ಘಟಕಗಳ 07 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (O&M)ಯನ್ನು ಒಟ್ಟು 391.82 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣ ಪಂಚಾಯತಿಯ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ ಆಸ್ತಿ ನಂ.3741, ಕ್ಷೇತ್ರ-400.63 ಚ.ಮೀಟರ್ ನಿವೇಶನವನ್ನು, ಕಾಂಗ್ರೆಸ್ ಭವನ ಟ್ರಸ್ಟ್ , ಬೆಂಗಳೂರು ಇವರಿಗೆ 30 ವರ್ಷಗಳವರೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿದೆ.
- ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ಆವೃತ್ತಿ 2.0 (ಕೆ-ಜಿಐಎಸ್ 2.0)”ನ್ನು 150 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ.
- ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಎಲ್ಲಾ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ (ESIS ಲಾಭ ಪಡೆಯುವವರನ್ನು ಸೇರಿಸಿ) ವಯೋ ವಂದನಾ ಯೋಜನೆಯನುಸಾರ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.
- ಬೆಂಗಳೂರಿನ ಯಲಹಂಕ ಬೆಳ್ಳಹಳ್ಳಿಯಲ್ಲಿ ಮತ್ತು ತಾಲೂಕು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ಆವರಣದಲ್ಲಿ ತಲಾ 50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪ್ರತ್ಯೇಕವಾಗಿ 100 ಹಾಸಿಗೆಗಳ ಸಾಮರ್ಥ್ಯದ ಎರಡು ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಗಳ ಕಟ್ಟಡಗಳನ್ನು (ಒಟ್ಟು 100 ಕೋಟಿ ರೂ.) ನಿರ್ಮಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
- ಮಧ್ಯಸ್ಥಿಕೆ ಮತ್ತು ಸಮನ್ವಯ ಕೇಂದ್ರ (ತಿದ್ದುಪಡಿ) ನಿಯಮಗಳು,2025 ಕ್ಕೆ ತಿದ್ದುಪಡಿ ತಂದಿದ್ದು, ಸಚಿವ ಸಂಪುಟ ಅನುಮೋದನೆ ನೀಡಿದೆ.
- ರಾಜ್ಯದಲ್ಲಿ ಡಿಜಿ ಕಂದಾಯ ಯೋಜನೆಯಡಿ ಸೇವೆಗಳನ್ನು ನೀಡಲು ರಾಜಸ್ವ/ಕಂದಾಯ ನಿರೀಕ್ಷಕರಿಗೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ 19.25 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ 3500 Chromebookಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- 11 ಅರಣ್ಯ/ ಅರಣ್ಯಾಧಾರಿತ/ ಸೂಕ್ಷ್ಮ ಸಮುದಾಯದ ವಸತಿ ರಹಿತ 6,856 ಕುಟುಂಬಗಳಿಗೆ (ಸೋಲಿಗ, ಹಸಲರು, ಗೌಡಲು, ಸಿದ್ಧಿ, ಕುಡಿಯ, ಮಲೆಕುಡಿಯ, ಕಾಡುಕುರುಬ, ಇರುಳಿಗ, ಬೆಟ್ಟ, ಕುರುಬ, ಯರವ, ಪಣಿಯನ್ ಇತ್ಯಾದಿ) ಒಟ್ಟು 160.00 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಹಾಗೂ ಸದರಿ ಯೋಜನೆಗೆ “ಮುಖ್ಯಮಂತ್ರಿಗಳ ಆದಿವಾಸಿ ಗೃಹ ಭಾಗ್ಯ ಯೋಜನೆ” ಎಂದು ಕರೆಯಲು ಆಡಳಿತಾತ್ಮಕ ಅನುಮೋದನೆ.
- ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) (ತಿದ್ದುಪಡಿ) ಆದೇಶ, 2025 ಕ್ಕೆ ಸಚಿವ ಸಂಪುಟ ಅನುಮೋದನೆ ಸಿಕ್ಕಿದೆ.
- ದುರಸ್ತಿ ಅಗತ್ಯವಿರುವ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳ 149 ಕಾಮಗಾರಿಗಳನ್ನು ಒಟ್ಟು ರೂ.183.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.