ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಬಾಯ್ಲರ್ ಹೌಸ್: ಸಿದ್ದರಾಮಯ್ಯ

ರೈತರ ಜಿಲ್ಲೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರ ಸೌಮ್ಯದಲ್ಲಿ ನಡೆಯುತ್ತಿರುವ ಸಕ್ಕರೆ ಕಾರ್ಖಾನೆ ಲಾಭದಾಯಕವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ಮೈ ಶುಗರ್ ಕಾರ್ಖಾನೆಗೆ ಬಾಯ್ಲರ್ ಹೌಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಮೈ ಶುಗರ್ ಕಾರ್ಖಾನೆಯ ಅಭಿವೃದ್ಧಿ ಗಾಗಿ 112 ಕೋಟಿ ರೂ ಅನುದಾನ ನೀಡಲಾಗಿದೆ. ಸಚಿವರು ಹಾಗೂ ಶಾಸಕರು ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಲಭಾದಾಯಕವಾಗಿ ನಡೆಯುವ ರೀತಿ ಯೋಜಿಸಬೇಕು ಎಂದರು.
ಮೇಕೆದಾಟು ಯೋಜನೆಗೆ ತಕರಾರು ಮಾಡಬೇಡಿ ಮೇಕೆದಾಟು ಯೋಜನೆಗೆ ಅನಗತ್ಯವಾಗಿ ತಕರಾರು ಮಾಡಬೇಡಿ ಎಂದು ತಮಿಳುನಾಡು ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಮೇಕೆದಾಟು ವಿಚಾರವಾಗಿ ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ರಾಜಕೀಯ ಮಾಡಬಾರದು, ಮೇಕೆದಾಟು ಯೋಜನೆ ನಿರ್ಮಾಣವಾದರೆ ತಮಿಳುನಾಡು ಹಾಗೂ ಕರ್ನಾಟಕ ಎರಡು ರಾಜ್ಯಗಳಿಗೂ ಅನುಕೂಲವಾಗಲಿದೆ. ಮೇಕೆದಾಟು ಯೋಜನೆ ಜಾರಿಯಾದರೆ, 66 ಟಿಎಂಸಿ ನೀರನ್ನು ನಾವು ಶೇಖರಣೆ ಮಾಡಿಕೊಳ್ಳಬಹುದು. ಅಗತ್ಯ ಬಿದ್ದಾಗ ಈ ನೀರನ್ನು ನಾವು ಬಳಸಿಕೊಳ್ಳಬಹುದು ಎಂದರು.
ಒಪ್ಪಂದದ ಪ್ರಕಾರ ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕು. ಪ್ರಸಕ್ತ ಸಾಲಿನಲ್ಲಿ ಈವರೆಗೆ 98 ಟಿಎಂಸಿ ನೀರು ಹರಿಸಬೇಕಿತ್ತು, ಉತ್ತಮ ಮಳೆಯಾಗಿರುವುದರಿಂದ 221 ಟಿಎಂಸಿ ನೀರನ್ನು ಹರಿಸಿದ್ದೇವೆ. ಹೆಚ್ಚುವರಿಯಾಗಿ 122 ಟಿಎಂಸಿ ನೀರು ಹರಿಸಿದ್ದೇವೆ. ಆಗಾಗಿ ನೀರಿನ ಸಮಸ್ಯೆ ಇಲ್ಲ ಎಂದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಮಾತನಾಡಿ 2006 ರಿಂದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಶಾಸಕ ಪಿ.ಎಂ ನರೇಂದ್ರ ಲಸ್ವಾಮಿ ಅವರು ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಚರಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರದಿಂದ ಮಳವಳ್ಳಿ ತಾಲ್ಲೂಕಿಗೆ ಅತಿ ಹೆಚ್ಚು ಅನುದಾನವನ್ನು ತಂದಿದ್ದಾರೆ ಎಂದು ಹೇಳಿದರು.
ಮಳವಳ್ಳಿ ತಾಲ್ಲೂಕಿನಲ್ಲಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಿರುವ ಕೀರ್ತಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರಿಗೆ ಸಲ್ಲುತ್ತದೆ. . ಕೃಷ್ಣರಾಜಸಾಗರ ಜಲಾಶಯದ 92 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ಮಾಹೆಯಲ್ಲೆ ಮೈದುಂಬಿ ಹರಿದಿದ್ದಾಳೆ. ಸದರಿ ವರ್ಷ ರಾಜ್ಯ ಒಂದೆರಡು ಜಿಲ್ಲೆ ಬಿಟ್ಟರೆ ಎಲ್ಲಾ ಜಿಲ್ಲೆಗಳಲ್ಲೂ ಸಕಾಲಕ್ಕೆ ಮಳೆ ಬಂದು ಕೃಷಿ ಸುಧಾರಣೆಗೊಂಡಿದೆ ಎಂದು ಹೇಳಿದರು.
ಅತಿ ಹೆಚ್ಚು ಮಳೆಯಾಗಿ 5-6 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ತಕ್ಷಣವೇ ಮುಖ್ಯಮಂತ್ರಿಗಳು ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಶೀಘ್ರವೇ ಪರಿಹಾರ ನೀಡುವಂತೆ ಸೂಚನೆ ನೀಡಿದರು. ಮಳೆಯಿಂದ ಅತಿ ಹೆಚ್ಚು ಹಾನಿಗೊಳಗಾದ ಗುಲ್ಬರ್ಗ ಜಿಲ್ಲೆಗೆ ಸುಮಾರು 600 ಕೋಟಿ ಮಿಮಾ ಹಣವನ್ನು ರೈತರಿಗೆ ಕೊಡಿಸಲಾಗಿದೆ. ರಾಜ್ಯದ ಜನತೆಯ ಬದುಕಿಗೆ ಆಸೆರೆಯಾಗಲು ಯಾವುದೇ ಮಧ್ಯವರ್ತಿಗಳು ಇಲ್ಲದೆ ನೇರವಾಗಿ ಪಂಚ ಗ್ಯಾರಂಟಿಗಳನ್ನು ಫಲಾನುಭವಿಗಳಿಗೆ ತಲುಪಿಸಿದ ಏಕೈಕ ಸರ್ಕಾರ ನಮ್ಮ ಸರ್ಕಾರ ಎಂದು ಅಭಿಪ್ರಾಯಪಟ್ಟರು.
ಕೇವಲ ಗ್ಯಾರಂಟಿ ಅಲ್ಲದೆ ನಾಬಾರ್ಡ್ ನಿಂದ ಬಡ್ಡಿ ರಹಿತ ಸಾಲವನ್ನು ಕೊಡಿಸಲಾಗುತ್ತಿದೆ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಪ್ರೇರೆಪಣೆಗೊಂಡು ಅನೇಕ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ವಿಪಕ್ಷಗಳು ಸತತವಾಗಿ ಮಂಡ್ಯದಲ್ಲಿ ಕೋಮು ಗಲಭೆಯ ಹೆಚ್ಚಿಸುತ್ತಿವೆ. ಜಿಲ್ಲೆಯಲ್ಲಿ ಕೋಮು ಗಲಭೆಯ ಹಬ್ಬಿಸಲು ಬಿಡುವುದಿಲ್ಲ. ನಮ್ಮ ಸರ್ಕಾರ ಯಾರ ಓಲೈಕೆಗೂ ಮಣೆ ಹಾಕದೆ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ ಅವರು ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ಸುಮಾರು 600 ಕೋಟಿಗೂ ಅಧಿಕ ವೆಚ್ಚದಲ್ಲಿ ಹನಿ ನೀರಾವರಿ ಯೋಜನೆಯನ್ನು ಕೈಗೊಳ್ಳಲಾಗುವುದು. ಅ ಯೋಜನೆಯನ್ನು ಮುಖ್ಯಮಂತ್ರಿಗಳ ಅಮೃತಾಸ್ತದಿಂದಲ್ಲೆ ಹನಿ ನೀರಾವರಿ ಯೋಜನೆಯನ್ನು ಉದ್ಘಾಟಿಸುತ್ತೇವೆ ಎಂದು ಹೇಳಿದರು.
ದಕ್ಷಿಣ ಭಾರತದಲ್ಲೇ ಎಲ್ಲೂ ಇಲ್ಲದ ಮತ್ಸ್ಯಲಯದ ಟನಲ್ ಅಕ್ವೇರಿಯಂ ಸ್ಥಾಪನೆಗೆ ಕೇಂದ್ರದಿಂದ ಅನುಮತಿ ದೊರೆತಿದೆ. ಮಳವಳ್ಳಿ ತಾಲ್ಲೂಕಿನಲ್ಲಿ ನೀರಾವರಿ ಆಧುನಿಕರಣ ಯೋಜನೆಗೆ ರಾಜ್ಯ ಸರ್ಕಾರ 300 ಕೋಟಿ ಅನುದಾನವನ್ನು ನೀಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿ ಕುಮಾರ್, ವಿಧಾನಪರಿಷತ್ ಶಾಸಕ ಮಧು ಜಿ ಮಾದೇಗೌಡ, ಮೈ ಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್, ಮಳವಳ್ಳಿ ಶಿವಣ್ಣ, ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ, ಮಾಜಿ ಶಾಸಕ ಚಂದ್ರಶೇಖರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ, , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಅನಿಲ್ ಕುಮಾರ್ ಕೆ ಟಿ ವರದಿ