ಇತ್ತೀಚಿನ ಸುದ್ದಿ
Trending

ಕುಡಿಯುವ ನೀರು ಸಮಸ್ಯೆಯಿರುವ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಮೂಲಕ ನೀರು ಪೂರೈಸಿ

ಚಾಮರಾಜನಗರ:ಜಿಲ್ಲೆಯ ಯಾವ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆಯೋ ಅಂತಹ ಕಡೆ ಪರ್ಯಾಯ ವ್ಯವಸ್ಥೆಗಳ ಮೂಲಕ ನೀರು ಪೂರೈಸಲು ಮುಂಜಾಗ್ರತಾ ಕ್ರಮ ವಹಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 
ನಗರದ ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿಂದು ಕುಡಿಯುವ ನೀರು, ಜಾನುವಾರುಗಳ ಮೇವು, ಮಳೆ, ಬೆಳೆ, ಪ್ರಕೃತಿ ವಿಕೋಪ ಸೇರಿದಂತೆ ಇತರೆ ವಿಷಯಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳ ವಿವರ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕುಡಿಯುವ ನೀರಿನ ಅಭಾವ ಇದೆಯೋ ಅಂತಹ ಸ್ಥಳಗಳಿಗೆ ಲಭ್ಯವಿರುವ ನೀರಿನ ಮೂಲಗಳಿಂದ ನೀರು ಸರಬರಾಜು ಮಾಡಬೇಕು. ಹೆಚ್ಚು ಹಣ ವೆಚ್ಚವಾದರೂ ಪರವಾಗಿಲ್ಲ. ಜನರಿಗೆ ನೀರು ಪೂರೈಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಂತರ್ಜಲ ಮಟ್ಟ ಹೆಚ್ಚು ಇರುವ ಕೊಳವೆಬಾವಿಗಳಿಂದ ಪೈಪ್‍ಲೈನ್ ಮುಖಾಂತರ ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಪೂರೈಸಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು. 

ನೀರಿನ ಸಮಸ್ಯಾತ್ಮಕ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಬೇಕು. ನೀರಿನ ತೊಂದರೆ ಪರಿಹರಿಸುವ ಸಂಬಂಧ ಅವರಿಂದಲೂ ಅಭಿಪ್ರಾಯಗಳನ್ನು ಪಡೆದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಹೆಚ್ಚು ಅನುದಾನ ಅಗತ್ಯವಿದ್ದಲ್ಲಿ ಉನ್ನತ ಮಟ್ಟದಲ್ಲಿ ಗಮನಕ್ಕೆ ತಂದು ಪಡೆದುಕೊಳ್ಳಬೇಕು. ಒಟ್ಟಾರೆ ಯಾವುದೇ ದೂರುಗಳು ಬಾರದಂತೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು. 

ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಪ್ರಗತಿ ಕುರಿತು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು ತ್ವರಿತವಾಗಿ ಯೋಜನೆ ಪೂರ್ಣಗೊಳಿಸಬೇಕು. ಹನೂರು ಭಾಗದಲ್ಲಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಇರುವ ತೊಡಕುಗಳನ್ನು ಪರಿಹರಿಸಿಕೊಳ್ಳಬೇಕು. ಉನ್ನತ ಹಂತದಲ್ಲಿ ಸಮಸ್ಯೆ ಇತ್ಯರ್ಥವಾಗಬೇಕಿದ್ದಲ್ಲಿ ಅದರ ಪೂರ್ಣ ಮಾಹಿತಿ ಕುರಿತ ವರದಿಯನ್ನು ಸಲ್ಲಿಸಿದ್ದಲ್ಲಿ ಮೇಲ್ಮಟ್ಟದಲ್ಲಿ ತಾವು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಜಾನುವಾರುಗಳಿಗೆ ಕಂಡುಬಂದಿರುವ ಚರ್ಮಗಂಟು ಖಾಯಿಲೆ ಪ್ರಕರಣಗಳ ಬಗ್ಗೆ ವಿವರ ಪಡೆದ ಸಚಿವರು ರೋಗ ಹರಡದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾನುವಾರು ಸಾಕುವವರಿಗೆ ಸಲಹೆ ಮಾಡಬೇಕು. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ರೋಗದಿಂದ ಮೃತಪಟ್ಟಿರುವ ಜಾನುವಾರುಗಳ ಅವಲಂಬಿತರಿಗೆ ಪರಿಹಾರ ನೀಡಬೇಕು. ಬೇರೆ ಕಡೆ ಇರುವ ಪಶು ವೈದ್ಯಾಧಿಕಾರಿ ಸಿಬ್ಬಂದಿಯನ್ನು ರೋಗ ಕಂಡುಬಂದಿರುವ ಸ್ಥಳಗಳಿಗೆ ನಿಯೋಜನೆ ಮಾಡಬೇಕು. ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ಹಿರಿಯ ಅಧಿಕಾರಿಗಳು ನಿರಂತರವಾಗಿ ಮೇಲುಸ್ತುವಾರಿ ಮಾಡುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಇದುವರೆಗೆ ಜಿಲ್ಲೆಯಲ್ಲಿ ಸುರಿದಿರುವ ಮಳೆ, ಕೃಷಿ, ತೋಟಗಾರಿಕೆ ಬೆಳೆಗಳ ಪ್ರಸ್ತುತ ಸ್ಥಿತಿ, ಬಿತ್ತನೆ ಚಟುವಟಿಕೆ, ಅರಣ್ಯದಂಚಿನ ಭಾಗಗಳಲ್ಲಿ ಜಾನುವಾರುಗಳಿಗೆ ಮೇವು, ಪ್ರಕೃತಿ ವಿಕೋಪದಂತಹ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ವಿವರವಾಗಿ ಚರ್ಚಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ನಿರ್ದೇಶನ ನೀಡಿದರು. 

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಚಾಮರಾಜನಗರ ತಾಲೂಕಿನ ಪುಣಜನೂರು, ಪುಣಜನೂರು ಗೇಟ್, ಕೋಳಿಪಾಳ್ಯ, ದೊಡ್ಡಮೂಡಹಳ್ಳಿ, ದೊಡ್ಡಮೋಳೆ, ಮೂಕನಪಾಳ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಚಾಮರಾಜನಗರ ಪಟ್ಟಣದಲ್ಲಿಯೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗಬೇಕಿದೆ. ಕೂಡಲೇ ಇದಕ್ಕೆ ಹೆಚ್ಚಿನ ಅನುದಾನವನ್ನು ವೆಚ್ಚ ಮಾಡಿ ಯಾವುದೇ ತೊಂದರೆಯಾಗದಂತೆ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. 

ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ಹನೂರು ತಾಲೂಕಿನ 48 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, 52 ಕೊಳವೆಬಾವಿಗಳನ್ನು ಕೊರೆಯಿಸಬೇಕಾಗಿದೆ. ಕುಡಿಯುವ ನೀರಿನ ತೊಂದರೆ ಇನ್ನಷ್ಟು ಉಲ್ಬಣವಾಗದಂತೆ ಕೂಡಲೇ ಪರಿಹಾರ ಕಂಡುಕೊಂಡು ಜನರಿಗೆ ನೀರು ಪೂರೈಸಬೇಕಿದೆ. ಪ್ರಸ್ತುತ ಅಗತ್ಯವಿರುವ ಅನುದಾನ ಒದಗಿಸುವ ಮೂಲಕ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಹನೂರು ಭಾಗದ ಹಲವೆಡೆ ಕುಡಿಯುವ ನೀರಿನ ಸಮಸ್ಯೆಗೆ ಅಂತರ್ಜಲ ಕುಸಿತ ಕಾರಣವಾಗಿದೆ. ಹನೂರು ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಪ್ರಸ್ತುತ 15ನೇ ಹಣಕಾಸು ನೆರವಿನಡಿ ಕುಡಿಯುವ ನೀರಿಗಾಗಿ ಗ್ರಾಮಗಳಲ್ಲಿ ವೆಚ್ಚ ಮಾಡಿರುವ ಪೂರ್ಣ ವಿವರವನ್ನು ಅಧಿಕಾರಿಗಳು ಒದಗಿಸಬೇಕು ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಗ್ರಾಮಿಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜಗದೀಶ್, ಪಶುಪಾಲನಾ ಇಲಾಖೆಯ ಜಾನುವಾರು ಆರೋಗ್ಯ ವಿಭಾಗದ ಹೆಚ್ಚುವರಿ ನಿರ್ದೇಶಕರಾದ ಡಾ. ಶಿವರುದ್ರಪ್ಪ, ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಶಿವಣ್ಣ, ಉಪನಿರ್ದೇಶಕರಾದ ಡಾ. ಮಂಜುನಾಥ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಆಬೀದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಿವಪ್ರಸಾದ್, ಹನೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ತಾಲೂಕುಗಳ ತಹಶೀಲ್ದಾರರು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button