ಕ್ರೈಂ
Trending

ಬೆಲ್ಟ್‌ನಿಂದ ಮನಸೋ ಇಚ್ಛೆ ಹಲ್ಲೆ, ವರ್ಗಾವಣೆಗೆ ಬೇಕಾದ 10 ಲಕ್ಷ ರೂ. ತರುವಂತೆ ಕಿರುಕುಳ!

ಬೆಂಗಳೂರು: ಕಾನೂನು ಪಾಲಿಸಬೇಕಾದ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಪೊಲೀಸ್ ಬೆಲ್ಟ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಬಯಲಾಗಿದೆ.ಪತ್ನಿಗೆ ವರದಕ್ಷಿಣೆ ಕಿರುಕುಳ, ಕೊಲೆಗೆ ಯತ್ನಿಸಿರುವ ಆರೋಪದಲ್ಲಿ ಸಿಲುಕಿರುವ ಧರ್ಮಸ್ಥಳ ಠಾಣೆಯ ಪಿಎಸ್‌ಐ ಪಿ.ಕಿಶೋರ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಪತಿ, ಕಿಶೋರ್ ಎಸಗಿರುವ ಕ್ರೌರ್ಯದ ಕುರಿತು ದಾಖಲೆ ಹಾಗೂ ವೈದ್ಯಕೀಯ ವರದಿ ಸಮೇತ ಪೊಲೀಸರಿಗೆ ದೂರು ನೀಡಿರುವ ಅವರ ಪತ್ನಿ ವರ್ಷಾ (27) ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಪಿಎಸ್‌ಐ ಕಿಶೋರ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2024ರ ಫೆಬ್ರವರಿಯಲ್ಲಿ ನೆಲಮಂಗಲ ಮೂಲದ ಪಿಎಸ್‌ಐ ಕಿಶೋರ್ ಜತೆ ನಾಗರಬಾವಿ ನಿವಾಸಿ ಬಿಬಿಎ ಪದವೀಧರೆ ವರ್ಷಾ ಅವರ ವಿವಾಹ ಸುಮಾರು 60 ಲಕ್ಷ ರೂ.ವೆಚ್ಚದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಮದುವೆ ಸಮಯದಲ್ಲಿ ಒಂದು ಬ್ರೇಸ್‌ಲೆಟ್, ಒಂದು ಉಂಗುರ, ಎರಡು ಲಕ್ಷ ರೂ.ನಗದನ್ನು ವರದಕ್ಷಿಣೆಯಾಗಿ ಕಿಶೋರ್ ಪಡೆದಿದ್ದರು. ಮದುವೆ ಖರ್ಚಿಗೆ ಎಂದು ಪ್ರತ್ಯೇಕವಾಗಿ 10 ಲಕ್ಷ ರೂ. ಅವರ ಕುಟುಂಬಸ್ಥರು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ, 23.60 ಲಕ್ಷರೂ. ಮೌಲ್ಯದ ಕಾರೊಂದನ್ನು ಕಿಶೋರ್ ಪಡೆದುಕೊಂಡಿದ್ದರು. ಸರಕಾರಿ ನೌಕರಿಯಲ್ಲಿ ಇರುವ ಕಾರಣಕ್ಕೆ ತೊಂದರೆ ಆಗಲಿದೆ ಎಂದು ತಮ್ಮ ತಂದೆಯ ಹೆಸರಿನಲ್ಲಿ ಖರೀದಿಸಿದ ಕಾರನ್ನು ಕಿಶೋರ್ ಅವರೇ ಬಳಸುತ್ತಿದ್ದಾರೆ. ಇಷ್ಟಾದರೂ ಪುನಃ ತವರು ಮನೆಯಿಂದ ಪ್ರತಿ ತಿಂಗಳು 50 ಸಾವಿರ ರೂ. ತರುವಂತೆ ಗಂಡ ಕಿಶೋರ್ ಹಾಗೂ ಅವರ ಕುಟುಂಬಸ್ಥರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ವರ್ಷಾ ದೂರಿನಲ್ಲಿ ಆರೋಪಿಸಿದ್ದಾರೆ.

ಮದುವೆಯಾದ ಕೆಲ ತಿಂಗಳಲ್ಲಿಯೇ ತವರು ಮನೆಯಿಂದ ಹೆಚ್ಚಿನ ಹಣ ತರುವಂತೆ ಗಂಡ ಕಿಶೋರ್ ಕಿರುಕುಳ ನೀಡುತ್ತಿದ್ದರು. ಇದಕ್ಕೆ ಒಪ್ಪದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುತ್ತಿದ್ದರು. ಗನ್ ಹಣೆಗೆ ಇಟ್ಟು ಕೊಲ್ಲುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಮಾ.21ರಂದು ರಾತ್ರಿ 9 ಗಂಟೆಯಿಂದ ತಡರಾತ್ರಿವರೆಗೂ ಜಗಳ ಮಾಡಿ ಹಲ್ಲೆಗೆ ಮುಂದಾದ ಕಿಶೋರ್, ಪೊಲೀಸ್ ಬೆಲ್ಟ್‌ನಿಂದ ದೇಹದ ಹಲವು ಭಾಗಗಳಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಚಪಾತಿ ಮಾಡುವ ಲಟ್ಟಣಿಗೆಯಿಂದ ಮುಖ ಸೇರಿದಂತೆ ಹಲವೆಡೆ ಹೊಡೆದಿದ್ದಾರೆ. ಅವರ ಹೊಡೆತಕ್ಕೆ ಕಿವಿಯಲ್ಲಿ ರಕ್ತಸ್ರಾವವಾಗಿತ್ತು. ತುಟಿಗೆ ಪೆಟ್ಟಾಗಿತ್ತು. ಅದೇ ದಿನ ರಾತ್ರಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ವರ್ಷಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಗಂಡ ಕಿಶೋರ್ ಹಲ್ಲೆ ಗಮನಿಸಿದ್ದ ನೆರೆಹೊರೆಯರು ಪೋಷಕರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದರು. ಹೀಗಾಗಿ ಮಾರನೇ ದಿನ ಬೆಳಗ್ಗೆ ತಂದೆ ತಾಯಿ ಹಾಗೂ ಪೋಷಕರು ಮನೆಗೆ ಆಗಮಿಸಿ ನಿತ್ರಾಣ ಸ್ಥಿತಿಯಲ್ಲಿದ್ದ ತನ್ನನ್ನು ಬೆಂಗಳೂರಿಗೆ ಕರೆತಂದಿದ್ದರು. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ವೈದ್ಯರ ಸಲಹೆ ಮೇರೆಗೆ ಕಿವಿ ಹಾಗೂ ಗಂಟಲು ಶಸ್ತ್ರಚಿಕಿತ್ಸಕರ ಬಳಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ವರ್ಷಾ ದೂರಿನಲ್ಲಿ ಆರೋಪಿಸಿದ್ದಾರೆ.

ಮೂಡಿಗೆರೆ ಠಾಣೆಯಲ್ಲಿದ್ದ ವೇಳೆ ಕಿಶೋರ್ ಜತೆ ಮದುವೆಯಾಗಿತ್ತು. ಮದುವೆಯಾದ 15 ದಿನಕ್ಕೇ ಈ ಠಾಣೆಯಲ್ಲಿ ಹೆಚ್ಚಿನ ಆದಾಯ ಸಿಗುತ್ತಿಲ್ಲ. ಹೀಗಾಗಿ, ಬೇರೆ ಠಾಣೆಗೆ ವರ್ಗಾವಣೆಗೆ ಪ್ರಯತ್ನಿಸುತ್ತಿದ್ದೇನೆ. ವರ್ಗಾವಣೆಗೆ ಮೇಲಿನ ಅಧಿಕಾರಿಗಳಿಗೆ 10 ಲಕ್ಷ ರೂ. ಲಂಚ ಕೊಡಬೇಕು. ಈ ಹಣವನ್ನು ನಿಮ್ಮ ತಂದೆಯಿಂದ ಕೊಡಿಸು ಎಂದು ಕಿಶೋರ್ ಕಿರುಕುಳ ನೀಡುತ್ತಿದ್ದರು ಎಂದು ವರ್ಷಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಪಿಎಸ್‌ಐ ಕಿಶೋರ್, ಅವರ ತಂದೆ-ತಾಯಿ, ಸೋದರನ ವಿರುದ್ದ ಕೊಲೆ ಯತ್ನ, ಕ್ರಿಮಿನಲ್ ಪಿತೂರಿ, ವರದಕ್ಷಿಣೆ ಕಿರುಕುಳ, ಅಪಾಯಕಾರಿ ಮಾರಕಾಸ್ತ್ರ ಬಳಸಿ ಹಲ್ಲೆ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಧರ್ಮಸ್ಥಳದ ಕಿಶೋ‌ರ್ ವಾಸದ ಮನೆಯಲ್ಲಿ ಕೃತ್ಯ ನಡೆದಿದೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button