ವಿಧಾನಸೌಧ ವೀಕ್ಷಣೆಗೂ ಶುಲ್ಕ! ರಾಷ್ಟ್ರಪತಿ-ಸಂಸತ್ ಭವನ ಮಾದರಿಯಲ್ಲಿ ಟೂರ್ ಗೈಡ್ ವ್ಯವಸ್ಥೆ

ಬೆಂಗಳೂರು, ಏಪ್ರಿಲ್ 08: ರಾಷ್ಟ್ರಪತಿ ಭವನ (Rashtrapati Bhavan) ಮತ್ತು ಸಂಸತ್ ಭವನದ (Sansat Bhavan) ಮಾದರಿಯಲ್ಲಿ ವಿಧಾನಸೌಧ (Vidhansoudha) ವೀಕ್ಷಣೆಗೆ ಪ್ರವಾಸಿಗರಿಂದ ಶುಲ್ಕ ವಸೂಲಿಗೆ ರಾಜ್ಯ ಸರ್ಕಾರ (Karnataka Government) ಮುಂದಾಗಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ವಿಧಾನಸೌಧ ವೀಕ್ಷಣೆಗೆ ಟೂರ್ ಗೈಡ್ ಏರ್ಪಡಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳಂದು ಮಾತ್ರ ಟೂರ್ ಗೈಡ್ ವ್ಯವಸ್ಥೆ ಇರುತ್ತದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರು ಶುಲ್ಕ ಪಾವತಿಸಿ ವಿಧಾನಸೌಧ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ವಿಧಾನಸೌಧ ಕಟ್ಟಡಕ್ಕೆ ಪ್ರಸ್ತುತ ಶಾಶ್ವತ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ, ಕಟ್ಟಡದ ಸೌಂದರ್ಯವು ಹೆಚ್ಚಾಗಿದ್ದು, ಪ್ರವಾಸಿಗರು ವಿಧಾನಸೌಧವನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಧಾನಸೌಧ ಕಟ್ಟಡ ವೀಕ್ಷಿಸಲು “Guided Tour” ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ವಿದೇಶಿ ಮತ್ತು ದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.
- ಸಾರ್ವತ್ರಿಕ ರಜಾ ದಿನಗಳಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರು ವಿಧಾನಸೌಧ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
- ವಿಧಾನಸೌಧ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ತಲಾ 30 ರಂತೆ ತಂಡಗಳನ್ನಾಗಿ ವಿಭಜಿಸಿ, ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಹಾಗೂ ಈ ಪ್ರತಿ ತಂಡಗಳ ಮೇಲ್ವಿಚಾರಣೆ ಮಾಡಲು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಅಧಿಕಾರಿಗಳು (Tourist Officer) ಇರುತ್ತಾರೆ. ಹಾಗೂ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಇವರನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಲಾಗುತ್ತದೆ.
- Guided Tour ಗೆ ಅನುವಾಗುವಂತೆ ಪ್ರವಾಸಿಗರು Online ಮುಖಾಂತರ ticket ಪಡೆಯಲು ಪ್ರವಾಸೋದ್ಯಮ ಇಲಾಖೆ ತಂತ್ರಾಂಶ ಅಭಿವೃದ್ಧಿ ಪಡಿಸುತ್ತಿದೆ.
- ಪ್ರವಾಸಿಗರಿಗೆ ನಿಗದಿಪಡಿಸುವ ಪ್ರವೇಶ ದರವು ಜನಸ್ನೇಹಿಯಾಗಿದೆ. ಹಾಗೂ ವಸೂಲಿ ಮಾಡುವ ಪ್ರವೇಶ ಶುಲ್ಕದಲ್ಲಿ ನಿರ್ದಿಷ್ಟ ಶುಲ್ಕವನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಲಿದೆ.
- ಉಪ ಪೊಲೀಸ್ ಆಯುಕ್ತರು, ವಿಧಾನಸೌಧ ಭದ್ರತೆ ಇವರು ಭದ್ರತೆಗೆ ಸಂಬಂಧಿಸಿದಂತೆ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಪ್ರವಾಸಿಗರ ಅಧಿಕೃತ ಗುರುತಿನ ಚೀಟಿಯನ್ನು ಪರಿಶೀಲಿಸಿ, ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
- ವಿಧಾನಸೌಧ ಕಟ್ಟಡ/ ಉದ್ಯಾನವನಗಳು/ಪ್ರತಿಮೆಗಳಿಗೆ ಯಾವುದೇ ದಕ್ಕೆ ಉಂಟಾಗದಂತೆ ಎಚ್ಚರಿಕ ವಹಿಸಬೇಕು. ಹಾಗೂ ಈ ಕುರಿತು ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ.
- ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಪರಿವೀಕ್ಷಣೆಯ ಕುರಿತು ರೂಟ್ ಮ್ಯಾಪ್ (Root Map/Lay out map) ವ್ಯವಸ್ಥೆ ಇದೆ.
- ಪರಿವೀಕ್ಷಣೆಯ ಸಂದರ್ಭದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸುಸಜ್ಜಿತ ವೈದ್ಯಕೀಯ ತಂಡದೊಂದಿಗೆ ಆಂಬ್ಯುಲೆನ್ಸ್ ಸೌಲಭ್ಯವನ್ನು ಕಲ್ಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
- ಅಗ್ನಿ ಅವಘಡ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗ್ನಿ ಶಾಮಕ ಇಲಾಖೆಯರು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸಿದ್ಧರಿರತಕ್ಕದ್ದು.
- ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ವಿಧಾನಸೌಧದ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು.