
ಬೆಂಗಳೂರು: ಬೇಸಗೆ ರಜೆಯ (Summer Holidays) ಸಂದರ್ಭದಲ್ಲಿ ಬೆಂಗಳೂರು (Bengaluru) ನಿವಾಸಿಗಳು ಮನೆಯ ಭದ್ರತೆ ಬಗ್ಗೆ ಸಾಕಷ್ಟು ಎಚ್ಚರದಿಂದ ಇರಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಸಲಹೆ ನೀಡಿದ್ದಾರೆ. ನಗರದಲ್ಲಿ ಇತ್ತೀಚೆಗೆ ನಡೆದ ಅಪರಾಧ ಕೃತ್ಯಗಳ ಮತ್ತು ಕಳ್ಳತನ ಪ್ರಕರಣಗಳ ಬಗ್ಗೆ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಿದ ಅವರು, ಸಾರ್ವಜನಿಕರು ಏನೇನು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆಯನ್ನೂ ನೀಡಿದ್ದಾರೆ. ವಿಶೇಷವಾಗಿ, ಮನೆಗೆ ಬೇಗ ಹಾಕಿ ಊರಿಗೆ ಅಥವಾ ಪ್ರವಾಸಕ್ಕೆ ತೆರಳುವ ಮುನ್ನ ಬೆಂಗಳೂರು ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.ದೀರ್ಘ ಅವಧಿಗೆ ಪ್ರವಾಸ ತೆರಳುವ ಸಂದರ್ಭದಲ್ಲಿ ಮನೆಯಲ್ಲಿ ಬೆಳೆಬಾಳುವ ವಸ್ತುಗಳನ್ನು ಇಡಬೇಡಿ. ಅವುಗಳನ್ನು ಬ್ಯಾಂಕಿನಲ್ಲಿ ಅಥವಾ ಲಾಕರ್ಗಳಲ್ಲಿ ಇಡುವುದು ಸೂಕ್ತ ಎಂದು ಅವರ ಸಲಹೆ ನೀಡಿದ್ದಾರೆ.
ಮನೆಗೆ ಗುಣಮಟ್ಟದ ಬೀಗ ಅಳವಡಿಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಿ. ಬೀಗದ ಕೀಯನ್ನು ಮನೆ ಪಕ್ಕದಲ್ಲಿ ಎಲ್ಲೋ ಇಟ್ಟು ಹೋಗುವ ಅಭ್ಯಾಸ ಮಾಡಬೇಡಿ. ಒಂದಕ್ಕಿಂತ ಹೆಚ್ಚು ದಿನ ಪ್ರವಾಸ ಹೋಗುವುದಿದ್ದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ತೆರಳಿ. ಇಂಥ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಗಸ್ತು ನಡೆಸುವುದು ಪೊಲೀಸರಿಗೂ ಸುಲಭವಾಗುತ್ತದೆ ಎಂದು ದಯಾನಂದ್ ಹೇಳಿದ್ದಾರೆ.
ಕಷ್ಟಪಟ್ಟು ಸಂಪಾದಿಸಿದ ಹಣ, ಚಿನ್ನವನ್ನು ಒಂದು ಸಣ್ಣ ಅಜಾಗರೂಕತೆಯಿಂದ ಕಳೆದುಕೊಳ್ಳಬೇಡಿ. ಕಳ್ಳರು ಕೇವಲ ಹೊರಗಿನಿಂದ ಬರುವವರಷ್ಟೇ ಅಲ್ಲ, ಮನೆಯಲ್ಲಿಯೂ ಇರಬಹುದು. ಹೀಗಾಗಿ ಮನೆ ಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಅವರ ಪೂರ್ವಾಪರವನ್ನು ಸರಿಯಾಗಿ ತಿಳಿದುಕೊಳ್ಳಿ. ಮನೆಯಲ್ಲಿ ಎಲ್ಲಿಂದರಲ್ಲಿ ಕೆಲಸದವರನ್ನು ಓಡಾಡಲು ಬಿಡಬೇಡಿ. ಬೆಲೆಬಾಳುವ ವಸ್ತುಗಳನ್ನು ಅವರಿಗೆ ಕಾಣುವಂತೆ ಇಡುವುದು, ಪ್ರದರ್ಶಿಸುವುದು ಮಾಡಬೇಡಿ ಎಂದು ಪೊಲೀಸ್ ಆಯುಕ್ತರು ಸಲಹೆಗಳನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನೇಪಾಳಿ ಗ್ಯಾಂಗನ್ನು ಬಂಧಿಸಿದ್ದರು. ಈ ಗ್ಯಾಂಗ್ ಮನೆಗೆ ನುಗ್ಗಿ ಚಿನ್ನ, ಬೆಳ್ಳಿ ಹಾಗೂ ಇತರ ಆಭರಣ ವಸ್ತುಗಳನ್ನು ಕಳವು ಮಾಡುತ್ತಿತ್ತು. ಇದೀಗ ಬೇಸಿಗೆ ರಜೆ ಸಂದರ್ಭದಲ್ಲಿ ಇಂತಹ ಗ್ಯಾಂಗ್ಗಳು ಇನ್ನಷ್ಟು ಸಕ್ರಿಯವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.