
ಹನೂರು : ರಾಜ್ಯ ಸರ್ಕಾರದ ಪ್ರತಿಷ್ಟಿತ ಸಂಪುಟದ ಮಹತ್ವದ ಸಭೆ ನಡೆದ ನಾಡಿನ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಸ್ಸಿಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ತಂಗುದಾಣವೇ ಇಲ್ಲ ಎಂಬ ಸತ್ಯ ನಿಮಗ್ಯಾರಿಗಾದರು ಗೊತ್ತೆ..!?
ಹೌದು ರಾಜ್ಯದಲ್ಲಿಯೇ ಅತಿ ಹೆಚ್ಚಿನ ಆದಾಯ ತರುವ ಪುಣ್ಯ ಕ್ಷೇತ್ರಗಳಲ್ಲೇ ಎರಡನೇ ಸ್ಥಾನದಲ್ಲಿರುವ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಕನಿಷ್ಟ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಕೊನೆಯ ಸ್ಥಾನದಲ್ಲಿದೆ ಎಂಬುದು ಅರಗಿಸಿಕೊಳ್ಳಲಾಗದ ಕಟು ಸತ್ಯ.
ಇದಕ್ಕೆ ತಾಜಾ ಉದಾಹರಣೆಯಾಗಿ ಕರ್ನಾಟಕ ರಾಜ್ಯ ತಮಿಳುನಾಡು ಸೇರಿದಂತೆ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ದಿನನಿತ್ಯ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದರ್ಶನ ಪಡೆದು ಹಿಂತಿರುವುದು ಸರಿಯಷ್ಟೆ. ಉಳ್ಳವರು ಕಾರುಗಳಲ್ಲಿ ಬಂದರೆ ಇಲ್ಲದ ಹಾಗೂ ಅತಿ ಹೆಚ್ಚು ಶೋಷಿತ ಹಾಗೂ ಸಾಮಾನ್ಯ ಭಕ್ತ ಗಣವನ್ನು ಹೊಂದಿರುವ ಮಾದಪ್ಪನ ಕ್ಷೇತ್ರಕ್ಕೆ ಬಸ್ಸಿನಲ್ಲಿ ಆಗಮಿಸುವವರೇ ಅಧಿಕ. ಹೀಗಿರುವಾಗ ಅವರು ಹಿಂತಿರುಗುವಾಗ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಬಿಸಿಲು ಮಳೆಯ ರಕ್ಷಣೆಗಾಗಿ ತಂಗುದಾಣ ಬೇಕೋ ಬೇಡವೋ..? ಬೇಕೇ ಬೇಕು ಎಂಬುದನ್ನು ಮನಗಂಡ ಅಂದಿನ ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ಮ.ಬೆಟ್ಟದ ದರ್ಮದರ್ಶಿ ಮಂಡಳಿಯಿಂದ 2006ರಲ್ಲಿ ಎರಡು ಬೃಹತ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿ ಅದನ್ನು ಅಂದಿನ ಹನೂರು ಶಾಸಕಿ ಪರಿಮಳಾ ನಾಗಪ್ಪರಿಂದ ಉದ್ಘಾಟನೆಯನ್ನು ಸಹ ನೆರವೇರಿಸಲಾಯಿತು.
ಕೆಲ ಕಾಲವಷ್ಟೆ ಪ್ರಯಾಣಿಕರ ಬಳಕೆಗೆ ಸಂದ ಅದು ತರುವಾಯ ನಂತರದಲ್ಲಿ ಟೆಂಡರ್ ಮೂಲಕ ಹೋಟೆಲ್ ಆಗಿ ಪರಿವರ್ತನೆಯಾಗಿ ಮುಂದುವರೆದು ಈಗಲೂ ಹೋಟೆಲ್ ಆಗಿಯೇ ಮುಂದುವರೆದಿದೆ. ಪ್ರಸ್ತುತ 2024 – 25 ನೇ ಸಾಲಿಗೆ ಮತ್ತೆ ಟೆಂಡರ್ ಆಗಿದ್ದು ಬಸವರಾಜು ಎಂಬುವರು ಎರಡೂ ಕಟ್ಟಡಗಳನ್ನು 11 ತಿಂಗಳ ಅವಧಿಗೆ ತಲಾ 25 ಲಕ್ಷದಂತೆ ಒಟ್ಟು 50 ಲಕ್ಷಕ್ಕೆ ಗುತ್ತಿಗೆಗೆ ಪಡೆದುಕೊಂಡು ಎರಡೂ ಕಟ್ಟಡದಲ್ಲೂ ಹೋಟೆಲ್ ನಡೆಸುತ್ತಿದ್ದಾರೆ. ಸರ್ಕಾರಿ ಕಟ್ಟಡದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದಿದ್ದರೂ ಹಿಂದಿನವರು ಎರಡೂ ಕಟ್ಟಡದ ಮದ್ಯೆ ಸಂದಿಯಲ್ಲಿ ಖಾಲಿ ಇದ್ದ ಸ್ಥಳದ ಮೇಲೆ ಅಕ್ರಮವಾಗಿ ಶೀಟ್ ಹಾಕಿ ಛಾವಣಿ ನಿರ್ಮಿಸಿ ಕೆಳಗೆ ಅಡುಗೆ ಕೋಣೆಯನ್ನು ನಿರ್ಮಿಸಿ ಬಳಕೆ ಮಾಡುತ್ತಿರುವುದಲ್ಲದೆ ಕಟ್ಟಡದ ಮುಂಭಾಗ ಹತ್ತಾರು ಅಡಿ ಸ್ಥಳವನ್ನು ಅತಿಕ್ರಮಿಸಿ ಅಕ್ರಮವಾಗಿ ಶೀಟ್ ಅಳವಡಿಸಿ ಬಳಕೆ ಮಾಡಿಕೊಳ್ಳಲಾಗಿದೆ.
ಪ್ರಯಾಣಿಕರಿಗೆಂದೇ ನಿರ್ಮಿಸಿದ್ದ ಎರಡೂ ಕಟ್ಟಡಗಳನ್ನು ಇತ್ತ ಹೋಟೆಲ್ ಗೆ ಬಾಡಿಗೆಗೆ ನೀಡಿ ಪ್ರಾಧಿಕಾರ ಹಣ ಸಂಪಾದನೆಗೆ ಮುಂದಾಗಿದ್ದರೆ ಅತ್ತ ಕೋಟಿ ಕೋಟಿ ಆದಾಯ ನೀಡುವ ಮಾದಪ್ಪನ ಭಕ್ತರಿಗೆ ಬಿಸಿಲು ಮಳೆಯಿಂದ ರಕ್ಷಣೆ ಸಿಗದೆ ಪರದಾಡಿ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕಿ ತೆರಳುವಂತಾಗಿದೆ.
ರಾಜ್ಯದಲ್ಲಿಯೇ ಹೆಸರು ವಾಸಿಯಾದ ಪುಣ್ಯ ಕ್ಷೇತ್ರದಲ್ಲಿ ಕೊನೆಯ ಪಕ್ಷ ಭಕ್ತರಿಗೆ ಪ್ರಮುಖವಾಗಿ ಬೇಕಾದ ಕನಿಷ್ಟ ಮೂಲಭೂತ ಸೌಲಭ್ಯವಾದ ಪ್ರಯಾಣಿಕರ ತಂಗುದಾಣ ಸಮರ್ಪಕ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಎಂತಹ ವಿಪರ್ಯಾಸ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಅನ್ನೋ ಹಾಗೆ ಪ್ರಮುಖವಾಗಿ ಬೇಕಾದದ್ದೆ ಇಲ್ಲವೆಂದ ಮೇಲೆ ಕೋಟ್ಯಾಂತರ ವ್ಯಯಿಸಿ ಆ ಕಾಮಗಾರಿ ಈ ಕಾಮಗಾರಿ ಎಂದು ಅಭಿವೃದ್ದಿ ಕಾಮಗಾರಿಗಳ ಹೆಸರಿನಲ್ಲಿ ಹಣ ಲೂಟಿಯಾಗುತ್ತಿದೆಯೋ ವಿನಹ ಸಾಮಾನ್ಯ ಭಕ್ತರಿಗೆ ಅನುಕೂಲವಾಗುವಂತಹ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂಬುದು ಭಕ್ತ ಗಣದ ಗಂಭೀರ ಆರೋಪ.
ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ ಎಂಬಂತೆ ಪ್ರಯಾಣಿಕರ ತಂಗುದಾಣ ಹೋಟೆಲ್ ಆಗಿ ಪರಿವರ್ತನೆಯಾಗಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನ.
ಕಳೆದ ಸಾಲಿನಲ್ಲಿ ಹೋಟೆಲ್ ಗಾಗಿ ಒಂದು ಕೊಠಡಿಯನ್ನು 11 ತಿಂಗಳ ಅವಧಿಗಾಗಿ 12 ಲಕ್ಷಕ್ಕೆ ಗುತ್ತಿಗೆ ಪಡೆದಿದ್ದ ವ್ಯಕ್ತಿಯೊಬ್ಬರು ಸಮರ್ಪಕವಾಗಿ ಹೋಟೆಲ್ ನಡೆಸಲಾಗದೆ ಕೇವಲ 4 ಲಕ್ಷ ಪಾವತಿಸಿ ಉಳಿಕೆ 8 ಲಕ್ಷಕ್ಕೆ ಉಂಡೆ ನಾಮ ತಿಕ್ಕಿ ಹೋಗಿದ್ದರೂ ಕೂಡ ಈ ಬಗ್ಗೆ ಪ್ರಾಧಿಕಾರ ಕಮಕ್ ಕಿಮಕ್ ಎನ್ನದೆ ಕುಳಿತಿದ್ದು ಮ.ಬೆಟ್ಟ ಎಂದರೆ ಹುಚ್ಚಿ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ಸಿಕ್ಕ ಸಿಕ್ಕ ಬಾಬ್ತಿನಲ್ಲಿ ಸಿಕ್ಕ ಸಿಕ್ಕವರು ಲೂಟಿ ಮಾಡುತ್ತಿದ್ದರೂ ಛಾಟಿ ಬೀಸುವವರಿಲ್ಲವಾಗಿದೆ.