ನಗರಸಭೆ
Trending

18 ಶಾಸಕರ ಅಮಾನತು ಪ್ರಶ್ನಿಸಿ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ

ಬೆಂಗಳೂರು, ಏಪ್ರಿಲ್​​ 08: ಹನಿಟ್ರ್ಯಾಪ್​ ಮತ್ತು ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ವಿಚಾರವಾಗಿ ಇತ್ತೀಚೆಗೆ ವಿಧಾನಸಭೆಯಲ್ಲಿ ಚರ್ಚೆ ವೇಳೆ ಭಾರೀ ಗಲಾಟೆ ನಡೆದಿತ್ತು. ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆ 18 ಬಿಜೆಪಿ (bjp) ಶಾಸಕರನ್ನು 6 ತಿಂಗಳು ಅಮಾನತು ಮಾಡಲಾಗಿತ್ತು. ಸದ್ಯ ಈ ವಿಚಾರವಾಗಿ ರಾಜ್ಯ ಬಿಜೆಪಿ ನಿಯೋಗ ರಾಜ್ಯಪಾಲರಿಗೆ (Governor) ದೂರು ನೀಡಿದ್ದು, 18 ಶಾಸಕರ ಅಮಾನತು ರದ್ಧುಪಡಿಸುವಂತೆ ಮನವಿ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯಪಾಲರು ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಮನವಿ ಮಾಡಿದ್ದೇವೆ ಎಂದಿದ್ದಾರೆ.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರ ಅಮಾನತು ಸಂಬಂಧ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಪ್ರಜಾಪ್ರಭುತ್ವ ವಿರೋಧಿ ನಡೆಯಿಂದ ರಾಜ್ಯ ಸರ್ಕಾರ ಹಿಂದಡಿ ಇಡಬೇಕು. ರಾಜ್ಯಪಾಲರು ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮಾರ್ಚ್​ 21ರಂದು ವಿಧಾನಸಭೆಯ 18 ಬಿಜೆಪಿ ಸದಸ್ಯರನ್ನು 6 ತಿಂಗಳ ಕಾಲ ಅಮಾನತು ಮಾಡಿರುವ ಕಾಂಗ್ರೆಸ್​ ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ಈ ಪತ್ರ ಬರೆಯಲಾಗುತ್ತಿದೆ. ಅಂದು ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಹನಿಟ್ರ್ಯಾಪ್​ ಮತ್ತು ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ತೀವ್ರ ವಾಗ್ವಾದಕ್ಕೆ ಕಾರಣವಾದವು.ವಿರೋಧ ಪಕ್ಷದ ಸದಸ್ಯರಾಗಿ ನಾವು ಸಭಾಧ್ಯಕ್ಷರ ಪೀಠದ ಬಳಿ ಪ್ರತಿಭಟನೆಯ ರೂಪವಾಗಿ ಜಮಾಯಿಸಿದೆವು. ಇದನ್ನು ಸ್ಪೀಕರ್ ಅವರು ತಪ್ಪಾಗಿ ಗ್ರಹಿಸುವುದಲ್ಲದೇ, ಆಡಳಿತ ಪಕ್ಷವೂ ಸಹ ತಪ್ಪಾಗಿ ಗ್ರಹಿಸಿದೆ. ಪ್ರತಿಭಟನೆ ಮಾಡುವಾಗ ನಾವು ಸದನದ ಸಭ್ಯತೆಗೆ ಅಸಮಂಜಸವಾದ ನಡವಳಿಕೆಯನ್ನು ಪ್ರದರ್ಶಿಸಿದ್ದೇವೆ ಎಂದು ಅವರು ಭಾವಿಸಿದ್ದಾರೆ. ಇದರ ಪರಿಣಾಮವಾಗಿ, ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 348ರ ಅಡಿಯಲ್ಲಿ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಯಿತು ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್​. ಅಶೋಕ್ ಪ್ರತಿಕ್ರಿಯಿಸಿದ್ದು, ಅಮಾನತು ಮಾಡಿದ್ದರ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಸ್ಪೀಕರ್ ಜತೆ ಮಾತನಾಡುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಸಿಎಂ, ಸ್ಪೀಕರ್​ ಜೊತೆ ನಾನು, ವಿಜಯೇಂದ್ರ ಮಾತನಾಡಿದ್ದೇವೆ. ರಾಜ್ಯಪಾಲರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕರ ಅಮಾನತು ಪ್ರಶ್ನಿಸಿ ರಾಜ್ಯಪಾಲರಿಗೆ ದೂರು ವಿಚಾರವಾಗಿ ವಿಧಾನಸೌಧದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದು, ಸರ್ವರಿಗೂ ಅವರವರ ಅನಿಸಿಕೆ ವ್ಯಕ್ತಪಡಿಸುವುದಕ್ಕೆ ಅವಕಾಶ ಇದೆ. ಎಲ್ಲವೂ ಸಮಯ ಮತ್ತು ನಿಯಮದ ಅನುಗುಣವಾಗಿ ನಡೆಯುತ್ತದೆ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button