ವಿದೇಶ
Trending

ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್ ಪೂರ್ವಜರ ಭೂಮಿ ಹರಾಜು

ಒಂದೆಡೆ ಭಾರತ(India) ಹಾಗೂ ಪಾಕಿಸ್ತಾನ(Pakistan)ದ ನಡುವೆ ಉದ್ವಿಗ್ನತೆ ಇದೆ. ಇನ್ನೊಂದೆಡೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಪೂರ್ವಜರು ಉತ್ತರ ಪ್ರದೇಶದ ಬಾಗ‌ಪತ್‌ ಜಿಲ್ಲೆಯಲ್ಲಿ ಹೊಂದಿದ್ದ ಜಮೀನು ಹರಾಜಾಗಿದೆ. ಏಪ್ರಿಲ್ 22ರಂದು ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ದಾಳಿ ನಡೆಸಿ 26 ಅಮಾಯಕರ ಪ್ರಾಣ ತೆಗೆದಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್​ ಅಡಿಯಲ್ಲಿ ಪಾಕಿಸ್ತಾನದ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ ನಾಶಪಡಿಸಿತ್ತು.ಅದಾದ ಮೇಲೆ ದಾಳಿ ಪ್ರತಿದಾಳಿಗಳು ನಡೆಯುತ್ತಲೇ ಇದ್ದವು. ಆದರೆ ಕೊನೆಯಲ್ಲಿ ಎರಡೂ ದೇಶಗಳು ಒಪ್ಪಂದಕ್ಕೆ ಬಂದಿದ್ದು, ಕದನ ವಿರಾಮ ಘೋಷಿಸಲಾಗಿದೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಪೂರ್ವಜರು ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಬರೌತ್​ ಪಟ್ಟಣದಲ್ಲಿ ಹೊಂದಿರುವ ಆಸ್ತಿಯನ್ನು 1.38 ಕೋಟಿ ರೂ.ಗೆ ಹರಾಜು ಹಾಕಲಾಗಿದೆ.

ಬರೌತ್‌ನ ಕೊಟಾನಾ ಗ್ರಾಮದಲ್ಲಿ ಇರುವ ಸುಮಾರು 13 ಬಿಘಾ ಭೂಮಿಯನ್ನು ಶತ್ರು ಆಸ್ತಿ ಎಂದು ಘೋಷಿಸಲಾಗಿದೆ. ಈಗ ಅದು 1.38 ಕೋಟಿ ರೂ.ಗೆ ಮಾರಾಟವಾಗಿದೆ. ಈ ಭೂಮಿ ಮೊದಲು ಪರ್ವೇಜ್ ಮುಷರಫ್ ಅವರ ಸಹೋದರ ಡಾ. ಜಾವೇದ್ ಮುಷರಫ್ ಮತ್ತು ಅವರ ಕುಟುಂಬದ ಹೆಸರಿನಲ್ಲಿತ್ತು ಆದರೆ 15 ವರ್ಷಗಳ ಹಿಂದೆ ಅದನ್ನು ಶತ್ರು ಆಸ್ತಿಯಾಗಿ ನೋಂದಾಯಿಸಲಾಗಿದೆ.ಈಗ ಆ ಭೂಮಿಯನ್ನು ಪಂಕಜ್ (ಗುತ್ತಿಗೆದಾರ), ಮನೋಜ್ ಗೋಯಲ್ (ಬರಾವುತ್ ನಿವಾಸಿ) ಮತ್ತು ಗಾಜಿಯಾಬಾದ್‌ನ ಜೆಕೆ ಸ್ಟೀಲ್ ಕಂಪನಿಗೆ ವರ್ಗಾಯಿಸಲಾಗಿದೆ. ಶನಿವಾರ, ಲಕ್ನೋದಿಂದ ಬಂದ ಶತ್ರು ಆಸ್ತಿ ಇಲಾಖೆಯ ಅಧಿಕಾರಿ ಪ್ರಶಾಂತ್ ಕುಮಾರ್, ಬರೌತ್‌ನಲ್ಲಿರುವ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾರಾಟ ಪತ್ರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಪರ್ವೇಜ್ ಮುಷರಫ್ ಅವರ ಕುಟುಂಬವು 1943 ರಲ್ಲಿ ಬರೌತ್‌ನ ಕೊಟಾನಾ ಗ್ರಾಮದಿಂದ ದೆಹಲಿಗೆ ಸ್ಥಳಾಂತರಗೊಂಡಿತು. ಕೆಲವು ವರ್ಷಗಳ ನಂತರ, 1947 ರಲ್ಲಿ ವಿಭಜನೆಯ ಸಮಯದಲ್ಲಿ, ಅವರು ಪಾಕಿಸ್ತಾನಕ್ಕೆ ಹೋಗಿ ನೆಲೆಸಿದರು. ಆದಾಗ್ಯೂ, ಅವರ ಮಹಲು ಮತ್ತು ಕೃಷಿ ಭೂಮಿ ಕೋಟಾದಲ್ಲಿಯೇ ಉಳಿದಿತ್ತು. ವರ್ಷಗಳ ನಂತರ, ಈ ಆಸ್ತಿಗಳನ್ನು ಶತ್ರು ಆಸ್ತಿಗಳೆಂದು ಪರಿಗಣಿಸಿ ಸರ್ಕಾರಿ ದಾಖಲೆಗಳಲ್ಲಿ ನೋಂದಾಯಿಸಲಾಯಿತು.ಶತ್ರು ಆಸ್ತಿ ಇಲಾಖೆ ಈಗ ಉತ್ತರ ಪ್ರದೇಶದಾದ್ಯಂತ ಅಂತಹ ಆಸ್ತಿಗಳನ್ನು ಹರಾಜು ಹಾಕುತ್ತಿದೆ. ಮಾರ್ಚ್ 28 ರಂದು 171 ಶತ್ರು ಆಸ್ತಿಗಳನ್ನು ಹರಾಜು ಹಾಕಲಾಗಿದ್ದು, ಇದರಿಂದ ಸರ್ಕಾರಕ್ಕೆ 15 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿತ್ತು. ಈ ಆಸ್ತಿ ಲಕ್ನೋ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹರಡಿಕೊಂಡಿವೆ.

Related Articles

Leave a Reply

Your email address will not be published. Required fields are marked *

Back to top button