ವಿದೇಶ
Trending

ನಕಲು ಮಾಡಲು ಮೆದುಳು ಇರಬೇಕು

ಕುವೈತ್: ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲವನ್ನು ಜಗತ್ತಿಗೆ ಸಾರಲು ಹೋಗಿರುವ ಭಾರತೀಯ ಸರ್ವಪಕ್ಷ ಸಂಸದೀಯ ನಿಯೋಗ, ವಿದೇಶಗಳಲ್ಲಿ ಪಾಕಿಸ್ತಾನವನ್ನು ಬೆತ್ತಲು ಮಾಡುವ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಕುವೈತ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತಾನಾಡಿರುವ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ, ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.ಕುವೈತ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ನಡೆದ ಸಂವಾದದದಲ್ಲಿ, ಅಸಾದುದ್ದೀನ್ ಓವೈಸಿ ಅವರು ಪಾಕಿಸ್ತಾನದ ನಕಲಿ ಅಜೆಂಡಾಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಪಾಕಿಸ್ತಾನದ ಭೂಸೇನಾ ಮುಖ್ಯಸ್ಥ ಜನರಲ್‌ ಅಸೀಮ್‌ ಮುನೀರ್‌ ಅವರು, ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಅವರಿಗೆ, ಆಪರೇಷನ್‌ ಬನ್ಯಾನ್‌ ನಕಲಿ ಫೋಟೋ ಉಡುಗೊರೆ ನೀಡಿದ ಪ್ರಸಂಗವನ್ನು ಅಸಾದುದ್ದೀನ್‌ ಓವೈಸಿ ವ್ಯಂಗ್ಯವಾಡಿದರು.

“ನಿನ್ನೆ ಪಾಕಿಸ್ತಾನಿ ಸೇನಾ ಮುಖ್ಯಸ್ಥರು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಒಂದು ನಕಲಿ ಫೋಟೋವನ್ನು ಉಡುಗೊರೆಯಾಗಿ ನೀಡಿದರು. ಈ ಮೂರ್ಖ ಜೋಕರ್‌ಗಳು ಭಾರತದೊಂದಿಗೆ ಸ್ಪರ್ಧಿಸಲು ಬಯಸುತ್ತಾರೆ. ಅವರು 2019ರ ಚೀನೀ ಸೇನಾ ಕವಾಯತಿನ ಛಾಯಾಚಿತ್ರವನ್ನು ನೀಡಿ, ಇದು ಭಾರತದ ವಿರುದ್ಧದ ವಿಜಯ ಎಂದು ಹೇಳಿಕೊಂಡಿದ್ದರು. ನಕಲು ಮಾಡಲು ಮೆದುಳು ಇರಬೇಕು” ಎಂದು ಅಸಾದುದ್ದೀನ್‌ ಓವೈಸಿ ಪಾಕಿಸ್ತಾನದ ಕಾಲೆಳೆದರು.‌”ಡಿಸೆಂಬರ್ 2023ರಲ್ಲಿ ಭಾರತವು ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಗೆ, ದಿ ರೆಸಿಸ್ಟನ್ಸ್‌ ಫೋರ್ಸ್ (ಟಿಆರ್‌ಎಫ್‌) ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಯ ಅಂಗಸಂಸ್ಥೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವು. ಮೇ 2024ರಲ್ಲಿ ಈ ಸಂಘಟನೆ ಭಾರತದ ಮೇಲೆ ದಾಳಿ ಮಾಡಬಹುದಾದ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಎಂದು ಸ್ಪಷ್ಟಪಡಿಸಿದ್ದೇವು. ಆದರೆ ಭದ್ರತಾ ಮಂಡಳಿಯ ಹೇಳಿಕೆಯಲ್ಲಿ ಟಿಆರ್‌ಎಫ್‌ ಹೆಸರಿನ ಉಲ್ಲೇಖವಿರದಂತೆ ಪಾಕಿಸ್ತಾನ ಪ್ರಯತ್ನಪಟ್ಟಿತು” ಎಂದು ಎಐಎಂಐಎಂ ಸಂಸದ ಗುಡುಗಿದರು.

ಮುಂದುವರೆದು, “ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿರುವ ಟಿಆರ್‌ಎಫ್‌, 4 ಹೇಳಿಕೆಗಳನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನಿ ಕಂಟೋನ್ಮೆಂಟ್ ಪ್ರದೇಶದ ಬಳಿಯೇ, ಟಿಆರ್‌ಎಫ್‌ ಸಭೆ ನಡೆಸಿರುವುದನ್ನು ನಮ್ಮ ಗುಪ್ತಚರ ಸಂಸ್ಥೆಗಳು ಖಚಿತಪಡಿಸಿವೆ. ಇದು ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಸ್ಪಷ್ಟ ಒಳಗೊಳ್ಳುವಿಕೆಯನ್ನು ತೋರಿಸುತ್ತದೆ” ಎಂದು ಅಸಾದುದ್ದೀನ್‌ ಓವೈಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಇನ್ನು ಪಾಕಿಸ್ತಾನವು ಭಾರತೀಯ ಮುಸ್ಲಿಮರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿರುವ ಅಸಾದುದ್ದೀನ್‌ ಓವೈಸಿ, “ಭಾರತೀಯ ಮುಸ್ಲಿಮರೊಂದಿಗೆ ಪಾಕಿಸ್ತಾನ ತನ್ನನ್ನು ಹೋಲಿಕೆ ಮಾಡಿಕೊಂಡರೆ ಪರಿಣಾಮ ನೆಟ್ಟಗಿರುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ “ಭಾರತೀಯ ಮುಸ್ಲಿಮರು ಪಾಕಿಸ್ತಾನದವರಿಗಿಂತ ಹೆಚ್ಚು ಪ್ರಾಮಾಣಿಕರು” ಎಂದು ಎಐಎಂಐಎಂ ಸಂಸದರು ನೆರೆ ರಾಷ್ಟ್ರಕ್ಕೆ ಸೂಕ್ತ ತಿರುಗೇಟು ನೀಡಿದರು.”ಪಾಕಿಸ್ತಾನವನ್ನು FATF ಬೂದು ಪಟ್ಟಿಗೆ ಮರಳಿ ತರಬೇಕು. ಇದರಿಂದ ಪಾಕಿಸ್ತಾನದ ಹಣದ ವಹಿವಾಟಿನ ಮೇಲೆ ನಿಗಾ ಇಡಬಹುದಾಗಿದೆ.ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದಕ ಗುಂಪುಗಳನ್ನು ಪ್ರಾಯೋಜಿಸಲು, ಮಧ್ಯಪ್ರಾಚ್ಯದದಿಂದ ಹಣದ ವರ್ಗಾವಣೆಯನ್ನು ಬಳಸುತ್ತದೆ ಎಂಬುದು ಸತ್ಯ” ಎಂದು ಅಸಾದುದ್ದೀನ್‌ ಓವೈಸಿ ತೀವ್ರ ವಾಗ್ದಾಳಿ ನಡೆಸಿದರು.


Related Articles

Leave a Reply

Your email address will not be published. Required fields are marked *

Back to top button