
ಮುಂಬಯಿ: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಇಡೀ ನಗರವೇ ಜಲಾವೃತವಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 107 ವರ್ಷಗಳ ಬಳಿಕ ಒಂದೇ ದಿನ ಮುಂಬಯಿನಲ್ಲಿ ಅತ್ಯಧಿಕ 295 ಮಿ.ಮೀ. ಅಧಿಕ ಮಳೆ ಸುರಿದಿದ್ದು, ವಾಣಿಜ್ಯ ರಾಜಧಾನಿ ಅಕ್ಷರಶಃ ಮುಳುಗಿ ಹೋಗಿದೆ.ಹವಾಮಾನ ಇಲಾಖೆ ಪ್ರಕಾರ 75 ವರ್ಷಗಳ ಬಳಿಕ ಮೊದಲ ಬಾರಿಗೆ 16 ದಿನ ಮೊದಲೇ ನೈರುತ್ಯ ಮುಂಗಾರು ಮುಂಬಯಿ ಪ್ರವೇಶಿಸಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 11 ರಂದು ಮುಂಗಾರು ಮಾರುತಗಳು ಮುಂಬಯಿ ಪ್ರವೇಶಿಸುತ್ತಿದ್ದವು. ಹವಾಮಾನ ಇಲಾಖೆಯು “ರೆಡ್” ಅಲರ್ಟ್ ನೀಡಿದೆ.
ಮಹಾರಾಷ್ಟ್ರದ ಭಾಗಗಳಾದ ಥಾಣೆ, ಪಾಲ್ಘರ್ ಮತ್ತು ಕೊಂಕಣ ಜಿಲ್ಲೆಗಳಲ್ಲಿ ರಸ್ತೆಗಳು, ರೈಲ್ವೆ ಹಳಿಗಳು, ಸೇತುವೆಗಳು, ಕೃಷಿ ಭೂಮಿ ಮತ್ತು ಕೆಲವು ವಸತಿ ಪ್ರದೇಶಗಳು ಮುಳುಗಿವೆ. ನೂರಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಕೊಂಕಣ, ಸಾಂಗ್ಲಿ, ಸತಾರಾ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿಯೂ ಭಾರಿ ಮಳೆಯಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಮಿಂಚು ಬಡಿದು ಮೂವರು ರೈತರು ಸಾವನ್ನಪ್ಪಿದ್ದಾರೆ. ರಾಯಗಡ ಜಿಲ್ಲೆಯ ಕರ್ಜತ್‌ನಲ್ಲಿ ರೋಷನ್ ಕಲೇಕರ್ (30), ಲಾತೂರು ಜಿಲ್ಲೆಯ ಅಹ್ಮದ್‌ಪುರ ತಹಸಿಲ್‌ನಲ್ಲಿ ವಿಕ್ರಮ್ ಕರಾಳೆ (55) ಮತ್ತು ರಂಜನಾಬಾಯಿ ಸಮುದಾಯ್ (55) ಮೃತಪಟ್ಟಿದ್ದಾರೆ. ಕಲ್ಯಾಣ ತಾಲೂಕಿನಲ್ಲಿ ಯಶ್ ಲೇಟ್ (16) ಎಂಬಾತ ಬಿರುಗಾಳಿಗೆ ಸಿಲುಕಿ ಮಿಂಚು ಬಡಿದು ಸಾವನ್ನಪ್ಪಿದ್ದಾನೆ. ಪುಣೆಯಲ್ಲಿ ನಾಲ್ಕು ಕರುಗಳು ಮಿಂಚಿಗೆ ಬಲಿಯಾಗಿವೆ. ರತ್ನಗಿರಿಯಲ್ಲಿ 48 ವರ್ಷದ ರಾಜೇಂದ್ರ ಕೊಲಂಬೆ ಎಂಬುವವರು ದಾಪೋಲಿ ತಹಸಿಲ್‌ನಲ್ಲಿ ಸೇತುವೆ ದಾಟುವಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಪ್ರವಾಹದಿಂದ ನದಿಗಳು ತುಂಬಿ ಹರಿಯುತ್ತಿವೆ. ದಡದಲ್ಲಿರುವ ದೇವಾಲಯಗಳು, ಜಮೀನುಗಳು ಮತ್ತು ಗ್ರಾಮಗಳು ಮುಳುಗಿವೆ. ಸೋಲಾಪುರ, ಪುಣೆ ಮತ್ತು ಸತಾರಾ ಜಿಲ್ಲೆಗಳಲ್ಲಿ 48 ಜನರನ್ನು ರಕ್ಷಿಸಲಾಗಿದೆ. ಖಾರ್ಘರ್ ಬಳಿಯ ಪಾಂಡವ ಕಡಾ ಜಲಪಾತದಿಂದ ಐವರನ್ನು ರಕ್ಷಿಸಲಾಗಿದೆ.
ಮುಂಬೈನಲ್ಲಿ ರೈಲು ಮತ್ತು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ರೈಲ್ವೆ ಹಳಿಗಳು ಮತ್ತು ರಸ್ತೆಗಳು ಮುಳುಗಿವೆ. ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಕೊಂಕಣ ಪ್ರದೇಶದಲ್ಲಿ ರಸ್ತೆಗಳು ಜಲಾವೃತವಾಗಿವೆ. ಮಹಾಡ್‌ನಿಂದ ರಾಯಗಡ ಕೋಟೆಗೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಉಲ್ಹಾಸ್ ನದಿ ಬದ್ಲಾಪುರದ ಬಳಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ರತ್ನಗಿರಿಯ ಜಾಗ್‌ಬುಡಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕಾಗಿ ಸನ್ನದ್ಧರಾಗಿರಲು ಸೂಚಿಸಿದ್ದಾರೆ.
ಭಾರಿ ಮಳೆಯಿಂದ ಮುಂಬಯಿನ ಕುರ್ಲಾ, ವಿದ್ಯಾವಿಹಾರ್, ಸಿಯಾನ್, ದಾದರ್, ಹಿಂದ್‌ಮಥ್, ಪರ್ಲೆ, ವರ್ಲಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಮೂರರಿಂದ ನಾಲ್ಕು ಅಡಿ ನೀರು ನಿಂತಿದೆ. ವರ್ಲಿ ಹಾಗೂ ಆಚಾರ್ಯ ಅತ್ರೆ ಚೌಕ್‌ಗಳಲ್ಲಿರುವ ನೆಲದಡಿಯ ಮೆಟ್ರೊ ಸ್ಟೇಷನ್‌ಗಳಿಗೆ ನೀರು ನುಗ್ಗಿದ್ದು, ರೈಲು ಸಂಚಾರ ರದ್ದುಗೊಳಿಸಲಾಗಿದೆ. ಮುಂಬಯಿ ಜೀವನಾಡಿ ಉಪನಗರ ರೈಲು ಸೇವೆಯಲ್ಲೂ ವ್ಯತ್ಯಯವಾಗಿದೆ. ಪಶ್ಚಿಮ, ಕೇಂದ್ರ ಮತ್ತಿತರ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸೇವೆ ವ್ಯತ್ಯಯವಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು. ನಿರಂತರ ಮಳೆಯಿಂದ ವಿಮಾನಯಾನ ಸೇವೆಯಲ್ಲೂ ಏರುಪೇರಾಗಿದೆ. ಸುಮಾರು 250 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಪರ್ಲೆಯಲ್ಲಿರುವ ಕೆಇಎಂ ಆಸ್ಪತ್ರೆಯ ಪ್ರವೇಶ ದ್ವಾರದವರೆಗೂ ನೀರು ನುಗ್ಗಿದೆ. ಆಸ್ಪತ್ರೆಗೆ ತೆರಳಿದ ರೋಗಿಗಳು ಪರದಾಡಿದರು. ದಕ್ಷಿಣ ಮುಂಬಯಿನಲ್ಲಿರುವ ರಾಜ್ಯ ಸಚಿವಾಲಯ ಭವನದ ಆವರಣ ಸಂಪೂರ್ಣ ಜಲಾವೃತವಾಗಿದೆ.