ಕ್ರೈಂ
Trending

ಬೆಟ್ಟಿಂಗ್‌ ಸಾಲ ತೀರಿಸಲು ಸಂಬಂಧಿಯನ್ನೇ ಕೊಂದು ಹಣ ದೋಚಿದ ಹಂತಕರು

ಬೆಂಗಳೂರು: ಕಾಟನ್‌ಪೇಟೆಯಲ್ಲಿ ನಡೆದಿದ್ದ ಲತಾ ಎಂಬ ಮಹಿಳೆಯ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು ಮೃತರ ಸಂಬಂಧಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಬೀದರ್‌ ಜಿಲ್ಲೆಯ ಪುರಂದರ (42) ಮತ್ತು ಈತನ ಸ್ನೇಹಿತ ಶಿವಪ್ಪ (36) ಬಂಧಿತರು. ಬೀದರ್‌ನ ಕೆಮಿಕಲ್‌ ಫಾರ್ಮಸ್ಯೂಟಿಕಲ್‌ ಕಾರ್ಖಾನೆಯಲ್ಲಿಎಲೆಕ್ಟ್ರಿಷಿಯನ್‌ ಕೆಲಸ ಮಾಡುತ್ತಿದ್ದ ಈ ಇಬ್ಬರು ಮದ್ಯವ್ಯಸನಿಗಳಾಗಿದ್ದರು. ಕ್ರಿಕೆಟ್‌ ಬೆಟ್ಟಿಂಗ್‌, ಜೂಜು ಮತ್ತು ರೈಸ್‌ ಪುಲ್ಲಿಂಗ್‌ ದಂಧೆಯಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ ಆರೋಪಿಗಳು ಸಾಲ ಮಾಡಿದ್ದರು. ಸಾಲ ತೀರಿಸಲು ಬೇಕಿದ್ದ ಹಣಕ್ಕಾಗಿ ಲತಾ ಅವರನ್ನು ಕೊಂದು ಹಣ ಮತ್ತು ಚಿನ್ನಾಭರಣ ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪುರಂದರ, ಲತಾ ಅವರ ಹತ್ತಿರದ ಸಂಬಂಧಿ. ಹೀಗಾಗಿ, ಆತ ಆಗಾಗ್ಗೆ ಲತಾ ಅವರ ಮನೆಗೆ ಬರುತ್ತಿದ್ದ. ಆತನಿಗೆ ಲತಾ ಅವರ ಕುಟುಂಬದ ಸಂಪೂರ್ಣ ಮಾಹಿತಿಯಿತ್ತು. ಲತಾ ಅವರ ಪತಿ, ಮಗಳು, ಮಗ ಮನೆಯಿಂದ ಯಾವಾಗ ಹೊರ ಹೋಗುತ್ತಾರೆ ಮತ್ತು ಯಾವಾಗ ವಾಪಸ್‌ ಬರುತ್ತಾರೆ ಎಂಬುದು ಆತನಿಗೆ ಗೊತ್ತಿತ್ತು. ಕುಟುಂಬ ಸದಸ್ಯರೆಲ್ಲಾ ಹೊರ ಹೋದ ನಂತರ ಲತಾ ಒಬ್ಬರೇ ಮನೆಯಲ್ಲಿಇರುತ್ತಾರೆ ಎಂಬುದನ್ನು ತಿಳಿದಿದ್ದ ಆತ ಅವರನ್ನು ಕೊಂದು ಹಣ, ಚಿನ್ನಾಭರಣ ದೋಚಲು ಸ್ನೇಹಿತ ಶಿವಪ್ಪನ ಜತೆ ಸೇರಿ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.ಪೂರ್ವಯೋಜಿತ ಸಂಚಿನಂತೆ ಆರೋಪಿಗಳು ಮೇ 26ರಂದು ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೀದರ್‌ನಿಂದ ಬೆಂಗಳೂರಿಗೆ ಬಂದಿಳಿದಿದ್ದರು. ನಂತರ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕಾಟನ್‌ಪೇಟೆಯಲ್ಲಿನ ಲತಾ ಅವರ ಮನೆ ಬಳಿ ಹೋಗಿದ್ದರು. ಆದರೆ, ಮನೆಯೊಳಗೆ ಹೋಗಲು ಧೈರ್ಯ ಸಾಲದೆ ಪಕ್ಕದ ರಸ್ತೆಗೆ ಹೋಗಿದ್ದರು. ಕೆಲ ಹೊತ್ತಿನ ಬಳಿಕ ಮಾವಿನ ಹಣ್ಣುಗಳನ್ನು ಖರೀದಿಸಿ, ಅವುಗಳನ್ನು ಕೊಡುವ ನೆಪದಲ್ಲಿ ಲತಾ ಅವರ ಮನೆಗೆ ಹೋಗಿದ್ದರು.

ಪುರಂದರ ಸಂಬಂಧಿಕನಾದ ಕಾರಣ ಲತಾ ಬಾಗಿಲು ತೆರೆದು, ಇಬ್ಬರಿಗೂ ತಿಂಡಿ ಕೊಟ್ಟು ಸತ್ಕರಿಸಿದ್ದರು. ಬಳಿಕ ಆರೋಪಿಗಳು ಏಕಾಏಕಿ ಲತಾ ಅವರ ಮೇಲೆರಗಿ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಮನೆಯ ಅಲ್ಮೇರಾದಲ್ಲಿದ್ದ 100 ಗ್ರಾಂ ಚಿನ್ನಾಭರಣ ಮತ್ತು 1.50 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಂತಕರು ಬಲ ಪ್ರಯೋಗಿಸಿ ಲತಾ ಅವರ ಮನೆಯೊಳಗೆ ಹೋಗಿರಲಿಲ್ಲ. ಜತೆಗೆ, ಮನೆಯೊಳಗೆ ಲತಾ ಅವರು ತಿಂಡಿ ಕೊಟ್ಟು ಸತ್ಕರಿಸಿದ್ದ ಬಗ್ಗೆ ತಟ್ಟೆ, ಲೋಟದ ಪುರಾವೆಗಳು ಸಿಕ್ಕಿದ್ದವು. ಈ ಸಂಗತಿಗಳನ್ನು ಅವಲೋಕಿಸಿದಾಗ ಪರಿಚಿತ ವ್ಯಕ್ತಿಗಳೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಲತಾ ಅವರ ಮನೆಯ ಸುತ್ತಮುತ್ತಲಿನ ಕಟ್ಟಡಗಳ ಸಿ.ಸಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದಾಗ ಪುರಂದರ ಮತ್ತು ಶಿವಪ್ಪ ಮನೆಗೆ ಬಂದು ಹೋಗಿರುವುದು ಗೊತ್ತಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.ಕಾಟನ್‌ಪೇಟೆಯಿಂದ ಮೆಜೆಸ್ಟಿಕ್‌ವರೆಗೆ 150ಕ್ಕೂ ಹೆಚ್ಚು ಸಿ.ಸಿ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಿ ಆರೋಪಿಗಳ ಗುರುತು ಪತ್ತೆ ಮಾಡಲಾಯಿತು. ಕೊಲೆಯ ನಂತರ ಆರೋಪಿಗಳು ಕಾಟನ್‌ಪೇಟೆಯಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ನಡೆದು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಬೀದರ್‌ಗೆ ತೆರಳಿದ್ದರು. ಮಗಳ ಮದುವೆಯ ಸಿದ್ಧತೆಯಲ್ಲಿದ್ದ ಲತಾ ದಂಪತಿಯು ಹಣ ಹಾಗೂ ಆಭರಣಗಳನ್ನು ಮನೆಯಲ್ಲಿಟ್ಟಿದ್ದ ವಿಚಾರ ತಿಳಿದಿದ್ದ ಆರೋಪಿ ಪುರಂದರ, ಅವುಗಳನ್ನು ದೋಚುವ ಉದ್ದೇಶಕ್ಕಾಗಿಯೇ ಈ ದುಷ್ಕೃತ್ಯ ಎಸಗಿದ್ದ. ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button