
ಭಾನುವಾರ ಗಾಜಾದ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, ಆಹಾರಕ್ಕಾಗಿ ಮುಗಿಬಿದ್ದ 85 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಆ ಪ್ರದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.
ಉತ್ತರ ಗಾಜಾದಲ್ಲಿನ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಗಾಜಾದ ಜನರು ಆಹಾರ ಪಡೆದುಕೊಳ್ಳಲು ಪ್ರಯತ್ನಿಸಿದಾಗ ಇಸ್ರೇಲಿ ಪಡೆಗಳು ಜನಸಮೂಹದ ಮೇಲೆಯೇ ಗುಂಡು ಹಾರಿಸಿ ಕೊಂದರು ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಾಧ್ಯಮ ಬಿತ್ತರಿಸಿರುವ ಕೆಲ ಫೋಟೋಗಳಲ್ಲಿ ಪ್ಯಾಲೆಸ್ತೀನಿಯನ್ ಪುರುಷರು ಗುಂಡಿನ ಸದ್ದು ಕೇಳುತ್ತಿದ್ದಂತೆ ಭಯದಿಂದ ಓಡು ಹೋಗುತ್ತಿರುವುದು ಕರುಳು ಹಿಂಡುವಂತಿದೆ.
ನಾವು ಹಸಿವಿನಿಂದ ಸಾಯುವುದೇ ಉತ್ತಮ: ಘಟನೆಯ ಪ್ರತ್ಯಕ್ಷದರ್ಶಿ ದಾಳಿಯ ಕರಾಳತೆಯನ್ನು ಬಿಚ್ಚಿಟ್ಟದ್ದು ಹೀಗೆ. “ಇದ್ದಕ್ಕಿದ್ದಂತೆ, ಟ್ಯಾಂಕ್‌ಗಳು ನಮ್ಮನ್ನು ಸುತ್ತುವರೆದು ಗುಂಡು ಹಾರಿಸಲು ಆರಂಭಿಸಿದವು. ನಾವು ಅಲ್ಲೇ ಸಿಕ್ಕಿಹಾಕಿಕೊಂಡೆವು. ಗುಂಡಿನ ಸುರಿಮಳೆಯಾಯಿತು. ನಾವು ಸುಮಾರು ಎರಡು ಗಂಟೆಗಳ ಕಾಲ ಅಲ್ಲೆ ಸಿಕ್ಕಿಬಿದ್ದೆವು. ಈ ದಾಳಿಯನ್ನು ನೋಡಿದರೆ ನಾವು ಹಸಿವಿನಿಂದ ಸಾಯುವುದೇ ಉತ್ತಮ” ಎಂದು 15 ದಿನದಿಂದ ಊಟವಿಲ್ಲದೇ, ಆಹಾರಕ್ಕಾಗಿ ಕಾಯುತ್ತಿದ್ದ ಇಹಾಬ್ ಅಲ್-ಝೀ ಎಂಬ ಸಂತ್ರಸ್ತ ವಿವರಿಸಿದ್ದಾರೆ. ದಾಳಿ ನಡೆದ ಪ್ರದೇಶದಲ್ಲಿ ಸತ್ತವರನ್ನು ಮತ್ತು ಗಾಯಗೊಂಡವರನ್ನು ಹೊತ್ತೊಯ್ಯುವ ಜನರ ಗದ್ದಲದ ಬಗ್ಗೆ ಅವರು ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
59,000ರ ಸನೀಹಕ್ಕೆ ತಲುಪಿದ ಪ್ಯಾಲೆಸ್ತೀನಿಯರ ಸಾವಿನ ಸಂಖ್ಯೆ: ಗಾಜಾದಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ಯಾಲೆಸ್ತೀನಿಯರು ಸಾವಿನ ದವಡೆಯಲ್ಲಿದ್ದಾರೆ. ಸಾವಿರಾರು ಜನರು ಹಲವಾರು ಬಾರಿ ಸ್ಥಳಾಂತರಗೊಂಡಿದ್ದಾರೆ. ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದಂತೆ ಗಾಜಾದ ಮೂರು ಪ್ರಮುಖ ಆಸ್ಪತ್ರೆಗಳ ಮುಂದೆ ಆಂಬ್ಯುಲೆನ್ಸ್‌ಗಳು ಭಾನುವಾರ ಏಕಕಾಲದಲ್ಲಿ ಎಚ್ಚರಿಕೆ ನೀಡಿ ತುರ್ತು ಕರೆ ನೀಡಿದವು. ಆರೋಗ್ಯ ಸಚಿವಾಲಯ ವೈದ್ಯರು ಅಪೌಷ್ಟಿಕ ಮಕ್ಕಳು ಮತ್ತು ಔಷಧಗಳ ಕೊರತೆಯ ಬಗ್ಗೆ ಫಲಕಗಳನ್ನು ಹಿಡಿದಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.ಇನ್ನು ನಿಮಗೆ ಈ ಮೊದಲೇ ತಿಳಿದಿರುವಂತೆ, 2023ರ ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್‌ಗೆ ನುಗ್ಗಿ ಸುಮಾರು 1,200 ಜನರನ್ನು ಕೊಂದು 251 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡ ಮೇಲೆ ಈ ಭಾಯನಕ ಯುದ್ಧ ಪ್ರಾರಂಭವಾಯಿತು. ಇಸ್ರೇಲ್‌ನ ಮಿಲಿಟರಿ ದಾಳಿಯಲ್ಲಿ 58,800ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಸತ್ತವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಎಂಬ ವರದಿ ಇದೆ.