
ಉಕ್ರೇನ್ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಧನ್ಯವಾದ ಅರ್ಪಿಸಿದ್ದಾರೆ. ಇದೇ ವೇಳೆ, ರಷ್ಯಾ ಜೊತೆಗಿನ ಯುದ್ಧ ಕೊನೆಗೊಳಿಸುವಲ್ಲಿ ಭಾರತದ ಕೊಡುಗೆಯನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಝೆಲನ್ಸ್ಕಿ, ಭಾರತದಿಂದ ಶಾಂತಿ ಮತ್ತು ಮಾತುಕತೆಯನ್ನು ಉಕ್ರೇನ್ ಎದುರು ನೋಡುತ್ತಿದೆ. ಇಡೀ ಜಗತ್ತು ಭಯಾನಕ ಯುದ್ಧವನ್ನು ಶಾಂತಿ ಮತ್ತು ಘನತೆಯಿಂದ ಕೊನೆಗೊಳಿಸಲು ನೋಡುತ್ತಿದ್ದು, ನಮಗೆ ಭಾರತದಿಂದ ನಿರೀಕ್ಷೆಗಳಿವೆ ಎಂದಿದ್ದಾರೆ.
ರಾಜತಾಂತ್ರಿಕತೆಯನ್ನು ಬಲಗೊಳಿಸುವ ಪ್ರತಿ ನಿರ್ಧಾರವೂ ಯುರೋಪ್‌ನಲ್ಲಿ ಮಾತ್ರವಲ್ಲದೆ, ಇಂಡೋ ಪೆಸಿಫಿಕ್ ಮತ್ತು ಅದರಾಚೆಗೂ ಉತ್ತಮ ಭದ್ರತೆಗೆ ಕಾರಣವಾಗುತ್ತದೆ ಎಂದೂ ತಿಳಿಸಿದ್ದಾರೆ.
ಆಗಸ್ಟ್ 24ರಂದು ಪ್ರಧಾನಿ ಮೋದಿ ಉಕ್ರೇನ್ ಅಧ್ಯಕ್ಷ ಶುಭಾಶಯಗಳ ಕುರಿತು ಪತ್ರಕ್ಕೆ ಪ್ರತಿಯಾಗಿ ಝೆಲನ್ಸ್ಕಿ ಈ ಪೋಸ್ಟ್ ಮಾಡಿದ್ದಾರೆ.
ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಹಾರೈಸಿದ್ದ ಝೆಲನ್ಸ್ಕಿ, ರಷ್ಯಾ ಜೊತೆಗಿನ ಯುದ್ಧ ಕೊನೆಗೊಳಿಸುವ ಗುರಿಯ ಎಲ್ಲಾ ಪ್ರಯತ್ನದಲ್ಲಿ ಭಾರತದ ಕೊಡುಗೆಗಳನ್ನು ನಿರೀಕ್ಷೆ ಮಾಡುವುದಾಗಿ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು ಅಧ್ಯಕ್ಷ ಝೆಲನ್ಸ್ಕಿ. ಭಾರತ ಮತ್ತು ಉಕ್ರೇನ್ ನಡುವಿನ ನಡುವಿನ ನಿಕಟ ಸಂಬಂಧ ಬೆಸೆಯುವ ನಿಮ್ಮ ಬದ್ಧತೆಯನ್ನು ಗೌರವಿಸುತ್ತೇವೆ. ಉಕ್ರೇನ್ಗೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯಿಂದ ಕೂಡಿದ ಭವಿಷ್ಯದ ಕುರಿತು ಹಾರೈಸುತ್ತೇವೆ ಎಂದು ತಿಳಿಸಿದ್ದರು .
ಕಳೆದ ವರ್ಷ ಆಗಸ್ಟ್ನಲ್ಲಿ ಕೀವ್ಗೆ ಭೇಟಿ ಮಾಡಿದ್ದನ್ನು ನೆನಪಿಸಿಕೊಂಡಿರುವ ಅವರು, ಎರಡೂ ದೇಶಗಳು ಪರಸ್ಪರ ಪ್ರಯೋಜನಕಾರಿ ಸಹಕಾರ ಬಲಪಡಿಸುವುದನ್ನು ಎದುರು ನೋಡುತ್ತಿದೆ. ನಾವು ಭಾರತ-ಉಕ್ರೇನ್ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿಯನ್ನು ಗಮನಿಸುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾರತ ಸದಾ ಶಾಂತಿಯ ಪರವಾಗಿ ನಿಲ್ಲಲಿದ್ದು, ಸಾಧ್ಯವಾದ ಎಲ್ಲಾ ಪ್ರಾಮಾಣಿಕ ಪ್ರಯತ್ನದ ಮೂಲಕ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಘರ್ಷ ನಿಲ್ಲಿಸಲು ಪ್ರಯತ್ನಿಸುವುದಾಗಿ ಮೋದಿ ತಿಳಿಸಿದ್ದರು.
ರಷ್ಯಾದಿಂದ ತೈಲ ಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮೇಲೆ ಹೆಚ್ಚುವರಿ ದಂಡ ಶುಲ್ಕ ವಿಧಿಸಲು ಆಗಸ್ಟ್ 27ರಂದುಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಿಮ ದಿನ ನಿಗದಿಸಿದ್ದು, ಈ ದಿನ ಸನಿಹವಾಗುತ್ತಿದ್ದಂತೆ ಉಕ್ರೇನ್ ನಾಯಕನ ಈ ಹೇಳಿಕೆ ಗಮನಾರ್ಹ.