ಪ್ರವಾಹಕ್ಕೆ ತತ್ತರಿಸಿರುವ ಜಮ್ಮು- ಕಾಶ್ಮೀರ: ಪರಿಸ್ಥಿತಿ ಪರಿಶೀಲನೆಗೆ ಮುಂದಾದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಪ್ರವಾಹದಿಂದ ತತ್ತರಿಸಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಅವಲೋಕಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಜಮ್ಮು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶಾ ಅವರನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಇತರರು ಸ್ವಾಗತಿಸಿದರು. ಬಳಿಕ ರಾಜಭವನಕ್ಕೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದರು.
ರಾಜ್ಯದ ಪ್ರವಾಹ ಪರಿಸ್ಥಿತಿಯ ಪರಿಹಾರ ಕ್ರಮದ ಕುರಿತು ಪರಿಶೀಲನೆ ಹಿನ್ನೆಲೆ ಅಧಿಕಾರಿಗಳೊಂದಿಗೆ ಅಮಿತ್ ಶಾ ಉನ್ನತಮಟ್ಟದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಗೃಹ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಭದ್ರತಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ರಾಜ್ಯದಲ್ಲಿ ಸಾಗುತ್ತಿರುವ ಕಾರ್ಯಾಚರಣೆಗಳ ಸ್ಥಿತಿಗತಿಗಳ ಬಗ್ಗೆ ವಿವರಿಸಲಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಉನ್ನತ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಹಾನಿಯ ಮೌಲ್ಯಮಾಪನ, ಮೂಲಸೌಕರ್ಯ ನಷ್ಟ ಮತ್ತು ಜಾರಿಗೆ ತರಲಾಗುತ್ತಿರುವ ಪರಿಹಾರ ಕ್ರಮಗಳ ಕುರಿತು ವಿವರವಾದ ವರದಿಗಳನ್ನು ಮಂಡಿಸುವ ನಿರೀಕ್ಷೆಯಿದೆ.
ಆಗಸ್ಟ್ 26 ರಂದು ಮಾತಾ ವೈಷ್ಣೋದೇವಿ ದೇಗುಲಕ್ಕೆ ಹಳೆಯ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ 34 ಯಾತ್ರಿಕರು ಸಾವನ್ನಪ್ಪಿ 20 ಮಂದಿ ಗಾಯಗೊಂಡ ಕತ್ರಾ ಮತ್ತು ಕಿಶ್ತ್ವಾರ್‌ನ ಮೇಘಸ್ಫೋಟದಿಂದ ಪೀಡಿತ ಚಿಸೋಟಿ ಗ್ರಾಮ ಸೇರಿದಂತೆ ಪ್ರವಾಹಕ್ಕೆ ತುತ್ತಾಗಿದ್ದು, ಈ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಅವರು ನಡೆಸುವ ಸಾಧ್ಯತೆಯಿದೆ.
ಆಗಸ್ಟ್ 14 ರಿಂದ ಕಿಶ್ತ್ವಾರ್, ಕಥುವಾ, ರಿಯಾಸಿ ಮತ್ತು ರಾಂಬನ್ ಜಿಲ್ಲೆಗಳಲ್ಲಿ ಮೇಘಸ್ಫೋಟ, ಭೂಕುಸಿತ ಮತ್ತು ಹಠಾತ್ ಪ್ರವಾಹದ ನಂತರ 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು, 120 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ 33 ಮಂದಿ ನಾಪತ್ತೆಯಾಗಿದ್ದಾರೆ.
ರಾಜ್ಯದಲ್ಲಿ ಆಗಸ್ಟ್ 26-27 ರಂದು ದಾಖಲೆಯ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಿತು.
ಇತ್ತೀಚಿಗೆ ಮೇಘಸ್ಪೋಟಕ್ಕೆ ಗುರಿಯಾಗಿದ್ದ ರಂಬನ್ ಮತ್ತು ಉಧಂಪುರ ಜಿಲ್ಲೆಗೆ ನಿನ್ನೆ ಮುಖ್ಯಮಂತ್ರಿ ಒಮರ್ ಅಬ್ಧುಲ್ಲಾ ಪ್ರವಾಸ ನಡೆಸಿದ್ದು , ಪರಿಸ್ಥಿತಿ ಅವಲೋಕಿಸಿದರು. ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ, ಭೂಕುಸಿತ ಮತ್ತು ಮಣ್ಣು ಕುಸಿತದಿಂದ ಹೆಚ್ಚಿನ ಹಾನಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ (ಎನ್-ಎಚ್ 44)ಗೆ ಹೆಚ್ಚಿನ ಹಾನಿಯಾಗಿದೆ.