
ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ.50ರಷ್ಟು ದಂಡ ಪಾವತಿ ವ್ಯವಸ್ಥೆಗೆ ವಾಹನ ಸವಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಿಯಾಯಿತಿ ಸೌಲಭ್ಯ ಪಡೆಯಲು ಸೆ.12ರಂದು ಕೊನೆ ದಿನವಾಗಿದ್ದು, ತದನಂತರ ಈ ಯೋಜನೆ ವಿಸ್ತರಿಸುವುದಿಲ್ಲ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ತಿಳಿಸಿದೆ.
ಕಳೆದ ಆಗಸ್ಟ್ 23ರಿಂದ ಸೆ.12ರೊಳಗಾಗಿ ಉಲ್ಲಂಘಿರುವ ಸಂಚಾರ ಪ್ರಕರಣಗಳಿಗೆ ಶೇ.50ರಷ್ಟು ದಂಡ ರಿಯಾಯಿತಿ ಇದೆ. ತದನಂತರ ದಂಡ ಪಾವತಿಸುವವರು ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಹೀಗಾಗಿ ಸೌಲಭ್ಯವನ್ನು ಸದ್ಬಳಕೆ ಮಾಡುವಂತೆ ಪ್ರಾಧಿಕಾರ ಮನವಿ ಮಾಡಿದೆ. ಈಗಾಗಲೇ 19,36,556 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಂದ 54.30 ಕೋಟಿಗಿಂತ ಹೆಚ್ವು ದಂಡ ಸಂಗ್ರಹವಾಗಿದೆ. ಕೊನೆಯ ನಾಲ್ಕು ದಿನಗಳು ಬಾಕಿಯಿದ್ದು, ವಾಹನ ಸವಾರರು ಈ ಸೌಲಭ್ಯ ಬಳಸಿಕೊಳ್ಳಬೇಕು ಪ್ರಾಧಿಕಾರ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ, ಶೇ.50ರಷ್ಟು ದಂಡ ಪಾವತಿ ಸೌಲಭ್ಯ ಸೀಮಿತ ಅವಧಿವರೆಗೆ ಮಾತ್ರ ಇರಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಅವಧಿ ಮುಗಿಯಲಿದ್ದು, ಸವಾರರು ಕೂಡಲೇ ದಂಡ ಪಾವತಿಸಬೇಕು. ಯಾವುದೇ ಕಾರಣಕ್ಕೂ ಯೋಜನೆಯನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲ ದಿನವೇ 4 ಕೋಟಿ ದಂಡ ಪಾವತಿ: 2023ರ ಫೆಬ್ರವರಿ 11ರೊಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ, ಶೇ 50ರಷ್ಟು ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡುವ ಅವಕಾಶವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಆಗಸ್ಟ್ 23 ರಿಂದ ದಂಡ ಪಾವತಿಸಲು ಪ್ರಾರಂಭವಾಗಿದ್ದು, ಸೆಪ್ಟೆಂಬರ್ 12 ರವರೆಗೆ, ಒಟ್ಟು 21 ದಿನಗಳ ಕಾಲ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.
ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ನಿಗದಿ ಪಡಿಸಿದ್ದ ಮೊದಲ ದಿನ ಎಲ್ಲಾ ವಿಧಾನಗಳಿಂದ 1,48,747 ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು 4,18,20,500 ರೂ. ದಂಡ ಪಾವತಿ ಆಗಿತ್ತು. ಕೇವಲ ಒಂದು ವಾರದಲ್ಲಿ 24 ಕೋಟಿ ರೂ. ದಂಡ ಪಾವತಿಯಾಗಿತ್ತು. ಆಗಸ್ಟ್ 30 ಅಂತ್ಯಕ್ಕೆ ಒಟ್ಟು 8,52,201 ಪ್ರಕರಣಗಳು ಇತ್ಯರ್ಥವಾಗಿದ್ದು, 24,00,06,850 ರೂ. ದಂಡ ಸಂಗ್ರಹಣೆಯಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ತಿಳಿಸಿತ್ತು.
ಈ ಹಿಂದೆ 2023ರಲ್ಲಿಯೂ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಬಾಕಿ ಉಳಿಸಿಕೊಂಡಿದ್ದ ದಂಡ ಪಾವತಿಸಲು ಶೇ. 50 ರಷ್ಟು ರಿಯಾಯಿತಿ ಘೋಷಣೆ ಮಾಡಿತ್ತು. ಆಗ ಸುಮಾರು 250 ಕೋಟಿ ರೂ.ಗೂ ಹೆಚ್ಚಿನ ಪ್ರಮಾಣದ ದಂಡ ಪಾವತಿಯಾಗಿತ್ತು.