ನಟಿ ರನ್ಯಾ ತನಿಖೆಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕನ ಹೆಸರು ಬಹಿರಂಗ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರ ನಟಿ ರನ್ಯಾ ರಾವ್ ಅವರು ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ಜತೆ ನಂಟು ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.ರನ್ಯಾ ಅವರಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ತುಮಕೂರಿನ ಸಿರಾದಲ್ಲಿ 2023 ರಲ್ಲಿ 12 ಎಕರೆ ಮಂಜೂರಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಕಂದಾಯ ಗುಪ್ತಚರ ನಿರ್ದೇಶನಾಲ ಯವು (ಡಿಆರ್‌ಐ) ರನ್ಯಾ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಈ ಸಂಗತಿಗಳು ಬಯಲಾಗುತ್ತಿವೆ. ತನಿಖೆಯಲ್ಲಿ ಹಲವು ಪ್ರಭಾವಿ ವ್ಯಕ್ತಿಗಳು ಈ ಅಕ್ರಮಕ್ಕೆ ಕೈಜೋಡಿಸಿರುವುದು ಗೊತ್ತಾಗಿದೆ.ರಾಜಕೀಯ ವ್ಯಕ್ತಿಗಳ ಜತೆಗಿನ ನಂಟಿನ ಕಾರಣದಿಂದಲೇ ಜಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಸರಕಾರದ ಪ್ರಭಾವಿ ರಾಜಕಾರಣಿಯ ಹೆಸರು ಸಹ ಇದರಲ್ಲಿ ಕೇಳಿ ಬಂದಿದೆ. ಆ ರಾಜಕಾರಣಿಯ ಪ್ರಭಾವದಿಂದಲೇ ರನ್ಯಾ ಅವರ ಮೆಸರ್ಸ್ ಕ್ಸಿರೋದ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನಿರ್ದೇಶಕಿಯಾಗಿದ್ದಾರೆ ಎನ್ನಲಾಗಿದೆ.ರನ್ಯಾ ಬಂಧನದ ಬೆನ್ನಲ್ಲೇ ಚಿನ್ನ ಕಳ್ಳಸಾಗಣೆ ಮತ್ತೆರಡು ಪ್ರಕರಣಗಳು ಪತ್ತೆಯಾಗಿವೆ. ರನ್ಯಾ ಬಂಧನದ ನಂತರ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಮೂರು ಮಂದಿ ಚಿನ್ನ ಕಳ್ಳ ಸಾಗಣೆ ಮಾಡುವ ಯತ್ನದಲ್ಲಿ ಸಿಕ್ಕಿಬಿದ್ದಿದ್ದರು. ಆ ಆರೋಪಿಗಳಿಗೂ ರನ್ಯಾಗೂ ಸಂಬಂಧ ಇದೆಯೇ ಎಂಬ ಆಯಾಮದಲ್ಲಿ ಡಿಆರ್‌ಐ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮೂರೂ ಪ್ರಕರಣಗಳಲ್ಲಿ ಚಿನ್ನದ ಬಿಸ್ಕತ್‌ಗಳನ್ನು ಕಳ್ಳ ಸಾಗಣೆ ಮಾಡಲಾಗಿದೆ. ಅಲ್ಲದೆ, ಮೂರೂ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಚಿನ್ನದ ಬಿಸ್ಕತ್‌ಗಳು ಒಂದೇ ಮಾದರಿಯಲ್ಲಿಇರುವುದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ.ರನ್ಯಾ ಜತೆಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಬಗ್ಗೆ ಡಿಆರ್‌ಐ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ರನ್ಯಾ ರಾಜಕಾರಣಿಗಳು, ಚಿನ್ನಾಭರಣ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ನಂಟು ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದುಬೈನಲ್ಲಿಕೆ.ಜಿ. ಗಟ್ಟಲೇ ಚಿನ್ನ ಖರೀದಿಸಲು ಹಣ ಕೊಟ್ಟವರು ಯಾರೆಂದು ರನ್ಯಾ ಅವರು ಈವರೆಗೂ ಬಾಯ್ಬಿಟ್ಟಿಲ್ಲ. ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ತನಿಖೆಯ ಆರಂಭದಲ್ಲಿ ಹೇಳಿದ್ದ ರನ್ಯಾ, ಟ್ರ್ಯಾಪ್ ಮಾಡಿದವರು ಯಾರೆಂಬ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಸಿಬಿಐ ಅಧಿಕಾರಿಗಳು ರನ್ಯಾ ಅವರನ್ನು ವಿಚಾರಣೆ ನಡೆಸುವ ಉದ್ದೇಶಕ್ಕೆ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.ನಟಿ ರನ್ಯಾ 3 ದಿನಗಳ ಪೊಲೀಸ್ ಕಸ್ಟಡಿ ಅವಧಿ ಭಾನುವಾರಕ್ಕೆ ಮುಕ್ತಾಯವಾಗಿದ್ದು, ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗ್ತಿದೆ.