ಇತ್ತೀಚಿನ ಸುದ್ದಿ
Trending

ಬೆಂಗಳೂರಿಗರಿಗೆ ನೀರಿನ ದರ ಲೀಟರ್‌ಗೆ 1 ಪೈಸೆ ಹೆಚ್ಚಳ ಫಿಕ್ಸ್!

ಬೆಂಗಳೂರು: ಜಲಮಂಡಳಿ ನೀರಿನ ದರವನ್ನು ಲೀಟರ್‌ಗೆ ಒಂದು ಪೈಸೆ ಹೆಚ್ಚಿಸುವ ಸಾಧ್ಯತೆ ಇರುವುದರಿಂದ 756.36 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಇದರಿಂದ ಪ್ರತೀ ಮನೆಗೆ 500 ರೂ ನೀರಿನ ದರ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.ಸದ್ಯ ಬೆಂಗಳೂರು ಜಲಮಂಡಳಿಯ ವಾರ್ಷಿಕ ಆದಾಯ 1435.2 ಕೋಟಿ ರೂಪಾಯಿಗಳಾಗಿದ್ದು, ಕುಡಿಯುವ ನೀರಿನ ದರ ಪ್ರತಿ ಲೀಟರ್‌ಗೆ ಒಂದು ಪೈಸೆ ಹೆಚ್ಚಾದಲ್ಲಿ ವಾರ್ಷಿಕ 2,191.56 ಕೋಟಿ ರೂ.ಆಗಲಿದೆ. ಇದರಿಂದ ಮಂಡಳಿಗೆ 756.36 ಕೋಟಿ ರೂ.ಹೆಚ್ಚುವರಿ ಆದಾಯ ಸಂಗ್ರಹವಾಗಲಿದೆ.ಹೌದು, ಕುಡಿಯುವ ನೀರಿನ ದರ ಹೆಚ್ಚಳ ಕೋರಿ ಜಲಮಂಡಳಿಯು, ನಾಲ್ಕು ಶ್ರೇಣಿಯ ದರ ಪಟ್ಟಿಯನ್ನೊಳಗೊಂಡ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಈ ಪೈಕಿ ಮೊದಲ ಶ್ರೇಣಿಯ ದರ ಪಟ್ಟಿಗೆ ಸರಕಾರ ಅಸ್ತು ಎನ್ನುವ ಸಂಭವವಿದ್ದು, ಪ್ರತಿ ಲೀಟರ್‌ಗೆ 0.3 ಪೈಸೆಯಿಂದ 1 ಪೈಸೆಯಷ್ಟು ಏರಿಕೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಕಳೆದ 11 ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಆಗಿಲ್ಲ. ಹಾಲಿ ದರದನ್ವಯ ಜಲಮಂಡಳಿಗೆ ಮಾಸಿಕ 119.60 ಕೋಟಿಯಂತೆ ವಾರ್ಷಿಕ 1435.20 ಕೋಟಿ ರೂ. ವರಮಾನ ಸಂಗ್ರಹವಾಗುತ್ತಿದೆ. ಆದರೆ, ನಿರ್ವಹಣೆಗಾಗಿಯೇ ತಿಂಗಳಿಗೆ 170 ಕೋಟಿಯಂತೆ ವರ್ಷಕ್ಕೆ ಸುಮಾರು 2040 ಕೋಟಿ ವ್ಯಯವಾಗುತ್ತಿದೆ. ಪರಿಣಾಮ, ಜಲಮಂಡಳಿಗೆ ವಾರ್ಷಿಕ 605 ಕೋಟಿ ರೂ. ನಷ್ಟ ಉಂಟಾಗುತ್ತಿದೆ.ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನೀರಿನ ದರ ಪರಿಷ್ಕರಣೆ ಸಂಬಂಧ ಜನವರಿಯಲ್ಲಿ ಸಭೆ ನಡೆಸಿ, ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜಲಮಂಡಳಿ ಅಧಿಕಾರಿಗಳು 4 ಶ್ರೇಣಿಯ ದರ ಪಟ್ಟಿ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದ್ದರು.

ಜಲಮಂಡಳಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿನ ನಾಲ್ಕನೇ ಶ್ರೇಣಿಯ ದರ ಪಟ್ಟಿಗೆ ಸರಕಾರ ಅನುಮೋದನೆ ನೀಡಿದರೆ (0.8 ಪೈಸೆಯಿಂದ 1.50 ರೂ.ವರೆಗೆ) ಜಲಮಂಡಳಿಗೆ ಮಾಸಿಕ 207.29 ಕೋಟಿ ರೂ. ಮತ್ತು ವಾರ್ಷಿಕ 2487.48 ಕೋಟಿ ರೂ. ಆದಾಯ ಗಳಿಕೆ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದರು.ಆದರೆ, ವಿಧಾನ ಪರಿಷತ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ”ಗ್ರಾಹಕರಿಗೆ ಹೊರೆಯಾಗದಂತೆ ಪ್ರತಿ ಲೀಟರ್‌ ನೀರಿನ ದರವನ್ನು 1 ಪೈಸೆಯಷ್ಟು ಹೆಚ್ಚಿಸಲು ಚಿಂತಿಸಲಾಗಿದೆ” ಎಂದು ತಿಳಿಸಿದ್ದಾರೆ. ಈ ಮೂಲಕ ಪ್ರತಿ ಲೀಟರ್‌ಗೆ 0.3 ಪೈಸೆಯಿಂದ 1 ಪೈಸೆ ಹೆಚ್ಚಿಸುವ ಪ್ರಸ್ತಾವನೆಯ ಮೊದಲ ಆಯ್ಕೆಯ ದರಪಟ್ಟಿಯ ಜಾರಿಯ ಸುಳಿವು ನೀಡಿದ್ದಾರೆ. ಮೊದಲ ಆಯ್ಕೆಯಂತೆ ಒಂದು ಪೈಸೆ ಹೆಚ್ಚಾದರೆ, ಮಂಡಳಿಗೆ ಮಾಸಿಕ 182.63 ಕೋಟಿ ರೂ. ಮತ್ತು ವಾರ್ಷಿಕ 2191.56 ಕೋಟಿ ರೂ. ವರಮಾನ ಸಂಗ್ರಹವಾಗಲಿದೆ.

ಹಾಲಿ ನೀರಿನ ದರ (ಸಾವಿರ ಲೀ.ಗೆ):

* ಗೃಹ ಬಳಕೆ 7 ರಿಂದ 45 ರೂ.
* ಗೃಹ ಬಳಕೆ (ಅಪಾರ್ಟ್‌ಮೆಂಟ್‌ಗಳಿಗೆ) 22 ರೂ. (ಬಲ್ಕ್)
* ಗೃಹೇತರ 50 ರಿಂದ 70 ರೂ.
* ಕೈಗಾರಿಕೆಗಳು 90 ರೂ.
* ಒಳಚರಂಡಿ ಶುಲ್ಕವು ನೀರಿನ ದರದ ಶೇ. 25ರಷ್ಟು
* ವಾರ್ಷಿಕ ಆದಾಯ 1435.20 ಕೋಟಿ ರೂ.

ಸರಕಾರ ಪರಿಗಣಿಸುವ ಸಾಧ್ಯತೆ ಇರುವ ಮೊದಲ ಆಯ್ಕೆ ವರ್ಗ- ಪ್ರತಿ ಲೀಟರ್‌ಗೆ -ಪ್ರತಿ ಸಾವಿರ ಲೀಟರ್‌ ದರ (ರೂ.ಗಳಲ್ಲಿ)
ಗೃಹ ಬಳಕೆ- 0.3-1 ಪೈಸೆ -10-57 ರೂ.
ಅಪಾರ್ಟ್‌ಮೆಂಟ್‌- 1.3-3.30 ಪೈಸೆ – 35-55 ರೂ.
ಗೃಹೇತರ ಬಳಕೆ- 1 ರಿಂದ 1.30 ಪೈಸೆ- 60-100 ರೂ.
ಕೈಗಾರಿಕೆಗಳು – 1 ಪೈಸೆ – 100 ರೂ.
ಒಳಚರಂಡಿ ಶುಲ್ಕ: ನೀರಿನ ದರದ ಶೇ.50
ತಿಂಗಳ ಆದಾಯ: 182.63 ಕೋಟಿ ರೂ.
ವಾರ್ಷಿಕ ಆದಾಯ: 2191.56 ಕೋಟಿ ರೂ.

ಸದ್ಯದ ಆದಾಯ-ವೆಚ್ಚದ ವಿವರ

* 2014-24ರ ಅವಧಿಯ ಲ್ಲಿ ವಿದ್ಯುತ್‌ ಶುಲ್ಕ ಶೇ.107.3ರಷ್ಟು ಹೆಚ್ಚಳ
* ಮಂಡಳಿಯ ನಿರ್ವಾಹಣಾ ವೆಚ್ಚದಲ್ಲಿ ಶೇ.122.5ರಷ್ಟು ಏರಿಕೆ
* ವೇತನ ಮತ್ತು ಪಿಂಚಣಿ ವೆಚ್ಚ ಶೇ.61.3ರಷ್ಟು ಹೆಚ್ಚಳ
* ಮಾಸಿಕ ಆದಾಯ ಸಂಗ್ರಹ 119.6 ಕೋಟಿ ರೂ.
* ಮಾಸಿಕ ವೆಚ್ಚ 170 ಕೋಟಿ ರೂ.
* ಕಾವೇರಿ 5ನೇ ಹಂತದ ಅನುಷ್ಠಾನದ ಬಳಿಕ 210 ಕೋಟಿ ರೂ. ವೆಚ್ಚ
* ಪ್ರತಿ ತಿಂಗಳು 81 ಕೋಟಿ ರೂ. ನಷ್ಟ

Related Articles

Leave a Reply

Your email address will not be published. Required fields are marked *

Back to top button