ವಿದೇಶ
Trending

ಅಮೆರಿಕ ವೀಸಾ ರದ್ಧತಿ ಪ್ರಶ್ನಿಸಿ ಕೋರ್ಟ್‌ ಮೊರೆ ಹೋದ ವಿದ್ಯಾರ್ಥಿಗಳು!

ಹೊಸದಿಲ್ಲಿ: ಅಮೆರಿಕದಲ್ಲಿ ವ್ಯಾಪಕವಾಗಿ ವೀಸಾ ರದ್ದುಗೊಳಿಸುವಿಕೆಯು ನಡೆಯುತ್ತಿದೆ. ಇದರಿಂದ ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಇನ್ನು ಟ್ರಂಪ್ ಆಡಳಿತವು ತಮ್ಮ ವೀಸಾಗಳನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಹಲವಾರು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾದ ಮೇಲೆ ಅಮೆರಿಕದ ವಲಸೆ ನೀತಿ ಸಂಪೂರ್ಣವಾಗಿ ಬದಲಾಗಿದೆ. ಚಿಕ್ಕ ಚಿಕ್ಕ ವಿಚಾರಕ್ಕೆ ವಿದ್ಯಾರ್ಥಿಗಳ ವೀಸಾವನ್ನು ರದ್ದುಪಡಿಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಯಾವಾಗ ನಮ್ಮ ವೀಸಾ ರದ್ದಾಗುತ್ತೆ ಎಂಬ ಆತಂಕದಲ್ಲಿಯೇ ಜೀವನವನ್ನು ನಡೆಸುತ್ತಿದ್ದಾರೆ. ಇದರ ನಡುವೆ ಒಂದಿಷ್ಟು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಡೊನಾಲ್ಡ್‌ ಟ್ರಂಪ್‌ ಆಡಳಿತಕ್ಕೆ ಸೆಡ್ಡು ಹೊಡೆದಿದ್ದು, ತಮ್ಮ ವೀಸಾ ರದ್ದನ್ನು ಪ್ರಶ್ನಿಸಿ ಅಮೆರಿಕದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಸರ್ಕಾರದ ವಿರುದ್ಧ ಕೋರ್ಟ್‌ಗಳಲ್ಲಿ ಮೊಕದ್ದಮೆಯನ್ನು ಹೂಡಿದ್ದು, ದಿಢೀರನೇ ನಮ್ಮ ವೀಸಾ ರದ್ದು ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ವಾದ ಮಾಡುತ್ತಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಸರ್ಕಾರ ವಿದ್ಯಾರ್ಥಿಗಳ ವೀಸಾವನ್ನು ರದ್ದುಗೊಳಿಸುವ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಈ ನಿರ್ಧಾರದಿಂದ ನೂರಾರು ರಿಸರ್ಚರ್‌ಗಳು ಹಾಗೂ ವಿದ್ಯಾರ್ಥಿಗಳು ಬಂಧನ ಹಾಗೂ ಗಡೀಪಾರಿನ ಭೀತಿಯನ್ನು ಎದುರಿಸುತ್ತಿದ್ದಾರೆ. ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್‌ನಂತಹ ಖಾಸಗಿ ವಿಶ್ವವಿದ್ಯಾಲಯಗಳಿಂದ ಹಿಡಿದು ಮೇರಿಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಓಹಿಯೋ ಸ್ಟೇಟ್ ವಿಶ್ವವಿದ್ಯಾಲಯದಂತಹ ದೊಡ್ಡ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಕೂಡ ವೀಸಾ ರದ್ದಾಗುವ ಭೀತಿ ಎದುರಿಸುತ್ತಿದ್ದು, ಈಗಾಗಲೇ ಹಲವರ ವೀಸಾ ರದ್ದಾಗಿದೆ. ಈ ಹಿನ್ನೆಲೆ ದಿಢೀರ್‌ ವೀಸಾ ರದ್ದಾದ ವಿದ್ಯಾರ್ಥಿಗಳು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಸರ್ಕಾರವು ತಮ್ಮ ವೀಸಾವನ್ನು ರದ್ದುಗೊಳಿಸಿರುವುದು ಕಾನೂನು ಬಾಹಿರ, ಸರ್ಕಾರದ ನಿರ್ಧಾರ ಸಮರ್ಥನೀಯವಲ್ಲ ಎಂದು ವಾದಿಸಿದ್ದಾರೆ.

ಅಮೆರಿಕದಲ್ಲಿ ಹಲವಾರು ಕಾರಣಗಳಿಗೆ ವೀಸಾಗಳನ್ನು ರದ್ದುಗೊಳಿಸಲಾಗುತ್ತಿದೆ. ಆದರೆ, ಕೆಲವು ವಿದ್ಯಾರ್ಥಿಗಳ ವೀಸಾವನ್ನು ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕೂ ರಿವೋಕ್‌ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತಮ್ಮನ್ನು ಏಕೆ ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬುದು ಕೂಡ ಗೊತ್ತಾಗುತ್ತಿಲ್ಲ. ಈ ಹಿನ್ನೆಲೆ ವೇಯ್ನ್‌ ಸ್ಟೇಟ್‌ ಯೂನಿವರ್ಸಿಟಿ ಹಾಗೂ ಮಿಚಿಗನ್‌ ಯೂನಿವರ್ಸಿಟಿಗಳ ವಿದ್ಯಾರ್ಥಿಗಳ ಪರವಾಗಿ ಮಿಚಿಗನ್‌ನ ಎಸಿಎಲ್‌ಯು ವಕೀಲರು ಕೋರ್ಟ್‌ನಲ್ಲಿ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ವಿರುದ್ಧ ಧಾವೆ ಹೂಡಿದ್ದಾರೆ. ವಿದ್ಯಾರ್ಥಿಗಳ ವೀಸಾ ರದ್ದುಗೊಳಿಸುವ ನಿರ್ಧಾರ ರಾಷ್ಟ್ರವ್ಯಾಪಿಯಾಗಿದೆಯಾ? ಇದರ ಬಗ್ಗೆ ಲಿಖಿತ ಆದೇಶವಿದೆಯೇ? ಇತ್ತೀಚಿನ ವೀಸಾ ರದ್ಧತಿ ಕ್ರಮಗಳು ಅನುಮಾನ ಹುಟ್ಟಿಸುತ್ತಿವೆ ಎಂದು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಕಳೆದ ವಾರ ಫೆಡರಲ್ ನ್ಯಾಯಾಧೀಶರು ಟ್ರಂಪ್‌ ಆಡಳಿತಕ್ಕೆ ಮಂಗಳಾರತಿ ಎತ್ತಿದ್ದರು. ಅದಲ್ಲದೇ ಚೀನಾದ ಡಾರ್ಟ್‌ಮೌತ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಕ್ಸಿಯೋಟಿಯನ್ ಲಿಯು ಅವರ ವೀಸಾ ರದ್ದುಗೊಳಿಸಿರುವುದಕ್ಕೆ ತಡೆಯಾಜ್ಞೆಯನ್ನು ನೀಡಿದ್ದರು. ಈ ಹಿನ್ನೆಲೆ ಜಾರ್ಜಿಯಾ ಮತ್ತು ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಲಯದಲ್ಲಿ ವಕೀಲರು ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಿದ್ದು, ಟ್ರಂಪ್‌ ಆಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾಲೇಜುಗಳು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದು, ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗವಹಿಸಿರುವುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಕ್ಷುಲ್ಲಕ ಕಾರಣಕ್ಕೆ ಅಮೆರಿಕದ ಬಹಳಷ್ಟು ವಿದ್ಯಾರ್ಥಿಗಳ ವೀಸಾವನ್ನು ರದ್ದುಪಡಿಸಲಾಗುತ್ತಿದೆ ಎಂದು ವಾದಿಸುತ್ತಿವೆ.

ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಎಫ್‌ – 1 ವೀಸಾ ಪಡೆಯಲು ಬಹಳಷ್ಟು ಕಷ್ಟ ಪಟ್ಟಿರುತ್ತಾರೆ. ಬಹಳಷ್ಟು ಸಮಯವನ್ನು ವ್ಯಯಿಸಿರುತ್ತಾರೆ. ಆದರೆ, ಒಂದೇ ಬಾರಿಗೆ ಅವರ ವೀಸಾ ರದ್ದುಪಡಿಸುವುದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಮೆರಿಕದ ಕಾಲೇಜುಗಳಲ್ಲಿ ಪ್ರವೇಶ ಪಡೆದ ನಂತರ ವಿದ್ಯಾರ್ಥಿಗಳು ಅಮೆರಿಕ ರಾಯಭಾರ ಕಚೇರಿ ಅಥವಾ ವಿದೇಶದಲ್ಲಿರುವ ಕಾನ್ಸುಲೇಟ್‌ನಲ್ಲಿ ಅರ್ಜಿ ಮತ್ತು ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತಾರೆ. ಅದಲ್ಲಿ ತಮ್ಮ ಅಧ್ಯಯನಕ್ಕಾಗಿ ಸಾಕಷ್ಟು ಹಣಕಾಸಿನ ವ್ಯವಸ್ಥೆ ಇದೆ ಎಂಬುದನ್ನು ತೋರಿಸಬೇಕಾಗುತ್ತದೆ.ಇಷ್ಟೆಲ್ಲಾ ಮಾಡಿ ವೀಸಾ ತೆಗೆದುಕೊಂಡ ಬಳಿಕ ದಿಢೀರ್‌ ಅಂತಾ ವೀಸಾ ರದ್ದಾದರೆ ಏನು ಮಾಡಬೇಕು ಎಂಬುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ. ಬಂಧನ ಹಾಗೂ ಗಡಿಪಾರಿನ ಭೀತಿಯಿಂದ ಪಾರಾಗಲು ವಿದ್ಯಾರ್ಥಿಗಳು ವ್ಯಾಸಂಗವನ್ನು ತ್ಯಜಿಸಿ ದೇಶ ಬಿಟ್ಟು ಹೋಗುತ್ತಿದ್ದಾರೆ. ಕಾಲೇಜುಗಳು ವಿದ್ಯಾರ್ಥಿಗಳ ಪರ ನಿಲ್ಲುವ ಮಾತುಗಳನ್ನಾಡುತ್ತಿದ್ದು, ಫೆಡರಲ್‌ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಭರವಸೆ ನೀಡುತ್ತಿವೆ.


Related Articles

Leave a Reply

Your email address will not be published. Required fields are marked *

Back to top button