
IPL 2025: ಗುವಾಹಟಿಯ ಬರ್ಸಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 6ನೇ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ (Quinton de Kock) ಭರ್ಜರಿ ಪ್ರದರ್ಶನ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೆಕೆಆರ್ ಪರ ಆರಂಭಿಕನಾಗಿ ಕಣಕ್ಕಿಳಿದ ಡಿಕಾಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಡಿಕಾಕ್ ಶತಕದತ್ತ ಮುನ್ನುಗ್ಗಿದ್ದರು. ಪರಿಣಾಮ 17 ಓವರ್ಗಳ ಮುಕ್ತಾಯದ ವೇಳೆಗೆ ಕೆಕೆಆರ್ ತಂಡ 135 ರನ್ ಕಲೆಹಾಕಿತು. ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಗೆಲುವಿಗೆ 17 ರನ್ ಬೇಕಿದ್ದರೆ, ಅತ್ತ ಕ್ವಿಂಟನ್ ಡಿಕಾಕ್ ಶತಕ ಪೂರೈಸಲು 19 ರನ್ಗಳ ಅವಶ್ಯಕತೆಯಿತ್ತು.ಈ ಹಂತದಲ್ಲಿ ದಾಳಿಗಿಳಿದ ಜೋಫ್ರಾ ಆರ್ಚರ್ ಅವರ ಮೊದಲ ಎಸೆತದಲ್ಲೇ ಡಿಕಾಕ್ ಫೋರ್ ಬಾರಿಸಿದರು. ಎಡರನೇ ಎಸೆತದಲ್ಲಿ ಪುಲ್ ಶಾಟ್ನೊಂದಿಗೆ ಸಿಕ್ಸ್ ಸಿಡಿಸಿದರು. ಆದರೆ ಮೂರನೇ ಎಸೆತದಲ್ಲಿ ಜೋಫ್ರಾ ಆರ್ಚರ್ ವೈಡ್ ಎಸೆದರು. ಮರು ಎಸೆತದಲ್ಲಿ ಮತ್ತೊಂದು ವೈಡ್ ಎಸೆದಿದ್ದಾರೆ.ಪರಿಣಾಮ ಕೆಕೆಆರ್ ತಂಡವು ಕೇವಲ 5 ರನ್ಗಳ ಗುರಿ ಪಡೆಯಿತು. ಇತ್ತ ಒಂದು ಫೋರ್ ಹಾಗೂ ಒಂದು ಸಿಕ್ಸ್ನೊಂದಿಗೆ ಅಥವಾ 2 ಸಿಕ್ಸ್ಗಳೊಂದಿಗೆ ಶತಕ ಪೂರೈಸುವ ವಿಶ್ವಾಸದಲ್ಲಿದ್ದ ಡಿಕಾಕ್, ಜೋಫ್ರಾ ಆರ್ಚರ್ ಅವರ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 8 ವಿಕೆಟ್ಗಳ ಜಯ ತಂದುಕೊಟ್ಟರು.ಈ ಮೂಲಕ ಭರ್ಜರಿ ಸೆಂಚುರಿ ಸಿಡಿಸುವ ನಿರೀಕ್ಷೆಯಲ್ಲಿದ್ದ ಕ್ವಿಂಟನ್ ಡಿಕಾಕ್ ಅಜೇಯ 97 ರನ್ಗಳೊಂದಿಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಇತ್ತ ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿಯೇ ಎಸೆದಂತಿದ್ದ ವೈಡ್ಗಳಿಂದಾಗಿ ಕ್ವಿಂಟನ್ ಡಿಕಾಕ್ ಅವರಿಗೆ ಶತಕ ಕೈ ತಪ್ಪಿತು.ಇದೀಗ ವೈಡ್ಗಳನ್ನು ಎಸೆದು ಶತಕ ತಪ್ಪಿಸಿದ ಜೋಫ್ರಾ ಆರ್ಚರ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕ್ವಿಂಟನ್ ಡಿಕಾಕ್ 61 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 97 ರನ್ ಬಾರಿಸಿದರು. ಈ ಮೂಲಕ 17.3 ಓವರ್ಗಳಲ್ಲಿ 153 ರನ್ ಬಾರಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 8 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.