ಇತ್ತೀಚಿನ ಸುದ್ದಿ
Trending

ಚಂದ್ರನ ಮೇಲೆ ಬಳಸುವ ಇಟ್ಟಿಗೆಗಳ ಬಿರುಕುಗಳನ್ನು ಸರಿಪಡಿಸಲಿವೆ ಬ್ಯಾಕ್ಟೀರಿಯಾಗಳು: ಬೆಂಗಳೂರು ಮೂಲದ IISC ವಿಜ್ಞಾನಿಗಳ ಸಂಶೋಧನೆ

IISc Research: ಬೆಂಗಳೂರು ಮೂಲದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳು ವಿಶೇಷವಾದ ಟೆಕ್ನಾಲಾಜಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನದ ಪ್ರಕಾರ, ಚಂದ್ರನ ಮೇಲೆ ಬಳಸುವ ಇಟ್ಟಿಗೆಗಳಲ್ಲಿನ ಬಿರುಕುಗಳನ್ನು ಬ್ಯಾಕ್ಟೀರಿಯಾದ ಸಹಾಯದಿಂದ ಸರಿಪಡಿಸಬಹುದಾಗಿದೆ. ಈ ತಂತ್ರಜ್ಞಾನವು ಚಂದ್ರನ ತೀವ್ರ ತಾಪಮಾನ ಬದಲಾವಣೆಗಳು ಮತ್ತು ಕಠಿಣ ಪರಿಸರದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯಕವಾಗಬಹುದಾಗಿದೆ.ಹೌದು, ಐಐಎಸ್ಸಿ ಸಂಶೋಧಕರು ಚಂದ್ರಯಾನದ ಸ್ವರೂಪ ಬದಲಾಗುತ್ತಿದೆ ಎಂದು ಹೇಳಿದ್ದಾರೆ. ಹಿಂದೆ “ಹಾರಾಟ” ಕಾರ್ಯಾಚರಣೆಗಳು ಮಾತ್ರ ಇದ್ದವು. ಆದರೆ, ಈಗ ನಾಸಾದ ಆರ್ಟೆಮಿಸ್ ಕಾರ್ಯಾಚರಣೆಗಳಂತಹ ಪ್ರಯತ್ನಗಳು ಚಂದ್ರನ ಮೇಲೆ ಶಾಶ್ವತ ಆವಾಸಸ್ಥಾನಗಳನ್ನು ಸ್ಥಾಪಿಸಲು ಯೋಜಿಸುತ್ತಿವೆ. ಆದರೂ ಚಂದ್ರನ ಪರಿಸರವು ಅತ್ಯಂತ ಸವಾಲಿನದ್ದಾಗಿದೆ. ಅಲ್ಲಿನ ತಾಪಮಾನವು ಒಂದೇ ದಿನದಲ್ಲಿ 121 ಸೆಲ್ಸಿಯಸ್​ ಡಿಗ್ರಿಯಿಂದ -133°ಸೆಲ್ಸಿಯಸ್​ ಡಿಗ್ರಿಗೆ ಇಳಿಯಬಹುದು. ಅಷ್ಟೇ ಅಲ್ಲ ಸೌರಮಾರುತ ಮತ್ತು ಉಲ್ಕೆಗಳ ನಿರಂತರ ದಾಳಿಯೂ ಇರುತ್ತದೆ. ಇದರಿಂದಾಗಿ ಅಲ್ಲಿ ನಿರ್ಮಿಸಲಾದ ರಚನೆಗಳ ಇಟ್ಟಿಗೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳಬಹುದು. ಇದು ಅವುಗಳ ಬಾಳಿಕೆಯ ಮೇಲೆ ಪರಿಣಾಮ ಬೀರಬಹುದಾಗಿದೆ.

ಐಐಎಸ್ಸಿ ವಿಜ್ಞಾನಿಗಳು ‘ಸ್ಪೊರೊಸಾರ್ಸಿನಾ ಪ್ಯಾಶ್ಚುರಿ’ ಬ್ಯಾಕ್ಟೀರಿಯಾ, ಗೌರ್ ಗಮ್ ಮತ್ತು ಚಂದ್ರನ ಮಣ್ಣಿನಂತಹ ವಸ್ತುವಿನಿಂದ ಮಾಡಿದ ಸ್ಲರಿಯನ್ನು ತಯಾರಿಸಿ ಅದನ್ನು ಬಿರುಕುಗಳಲ್ಲಿ ತುಂಬಿಸಿದರು. ಈ ಬ್ಯಾಕ್ಟೀರಿಯಾವು ಪರಿಸರದಲ್ಲಿರುವ ಯೂರಿಯಾವನ್ನು ಒಡೆಯಬಹುದು ಮತ್ತು ಅದನ್ನು ಕಾರ್ಬೋನೇಟ್ ಮತ್ತು ಅಮೋನಿಯಾ ಆಗಿ ಪರಿವರ್ತಿಸಬಹುದು. ಇಟ್ಟಿಗೆಗಳಲ್ಲಿರುವ ಕ್ಯಾಲ್ಸಿಯಂ ಈ ಕಾರ್ಬೋನೇಟ್‌ನೊಂದಿಗೆ ಸೇರಿಕೊಂಡು ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ರೂಪಿಸುತ್ತದೆ, ಇದು ಗೌರ್ ಗಮ್ ಜೊತೆಗೆ ಫಿಲ್ಲರ್ ಮತ್ತು ಸಿಮೆಂಟಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಬಿರುಕುಗಳನ್ನು ತುಂಬುತ್ತದೆ ಮತ್ತು ಇಟ್ಟಿಗೆಗಳ ಬಲವನ್ನು ಹೆಚ್ಚಿಸುತ್ತದೆ. ಈ ಅಧ್ಯಯನವನ್ನು ‘ಫ್ರಾಂಟಿಯರ್ಸ್ ಇನ್ ಸ್ಪೇಸ್ ಟೆಕ್ನಾಲಜೀಸ್’ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಬ್ಯಾಕ್ಟೀರಿಯಾಗಳಿಂದ ದುರಸ್ತಿ ಮಾಡಲಾದ ಇಟ್ಟಿಗೆಗಳು 100 ಡಿಗ್ರಿ ಸೆಲ್ಸಿಯಸ್​ನಿಂದ 175°ಡಿಗ್ರಿ ಸೆಲ್ಸಿಯಸ್​ವರೆಗಿನ ತಾಪಮಾನವನ್ನು ತಡೆದುಕೊಳ್ಳಬಲ್ಲವು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಚಂದ್ರನ ಮೇಲ್ಮೈಯಲ್ಲಿನ ತಾಪಮಾನದಲ್ಲಿನ ತೀವ್ರ ವ್ಯತ್ಯಾಸಗಳು ದೀರ್ಘಾವಧಿಯಲ್ಲಿ ರಚನೆಗಳ ಮೇಲೆ ಆಳವಾದ ಪರಿಣಾಮ ಬೀರುತ್ತವೆ ಎಂದು ಐಐಎಸ್ಸಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಕೌಶಿಕ್ ವಿಶ್ವನಾಥನ್ ತಿಳಿಸಿದ್ದಾರೆ. ಆರಂಭದಲ್ಲಿ ಬ್ಯಾಕ್ಟೀರಿಯಾಗಳು ಸಿಂಟರ್ ಮಾಡಿದ ಇಟ್ಟಿಗೆಗಳಿಗೆ ಅಂಟಿಕೊಳ್ಳುತ್ತವೆಯೇ ಎಂದು ನಮಗೆ ಸಂದೇಹವಿತ್ತು. ಆದರೆ ಅದು ಸ್ಲರಿಯನ್ನು ಘನೀಕರಿಸುವುದಲ್ಲದೇ ಇಟ್ಟಿಗೆಗಳಿಗೆ ಚೆನ್ನಾಗಿ ಅಂಟಿಕೊಳ್ಳುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಪ್ರಮುಖ ಸಂಶೋಧಕ ಅಲೋಕ್ ಕುಮಾರ್ ಹೇಳಿದರು. ಸಿಂಟರಿಂಗ್ ಎನ್ನುವುದು ಚಂದ್ರನ ಮಣ್ಣಿನಂತಹ ವಸ್ತುಗಳನ್ನು ಪಾಲಿವಿನೈಲ್ ಆಲ್ಕೋಹಾಲ್ ಬಳಸಿ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡುವ ಪ್ರಕ್ರಿಯೆಯಾಗಿದ್ದು, ಬಲವಾದ ಇಟ್ಟಿಗೆಗಳನ್ನು ರಚಿಸುತ್ತದೆ. ಆದರೂ ಅಂತಹ ಇಟ್ಟಿಗೆಗಳು ಸುಲಭವಾಗಿ ದುರ್ಬಲವಾಗಿರುತ್ತವೆ ಮತ್ತು ಅವುಗಳಲ್ಲಿ ಬಿರುಕುಗಳು ಉಂಟಾದರೆ ಇಡೀ ರಚನೆಯು ಕುಸಿಯಬಹುದು.

ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು ಈ ಹಿಂದೆ ಚಂದ್ರ ಮತ್ತು ಮಂಗಳ ಗ್ರಹದಂತಹ ಮಣ್ಣಿನಿಂದ ಇಟ್ಟಿಗೆಗಳನ್ನು ತಯಾರಿಸಲು ಸ್ಪೋರೊಸಾರ್ಸಿನಾ ಪಾಶ್ಚುರಿ ಬ್ಯಾಕ್ಟೀರಿಯಾವನ್ನು ಬಳಸಿದ್ದರು. ಈಗ ಸಂಶೋಧಕರು ಈ ಬ್ಯಾಕ್ಟೀರಿಯಾದ ಮಾದರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅಧ್ಯಯನವನ್ನು ಇಸ್ರೋದ ಗಗನಯಾನ ಮಿಷನ್ ಅಡಿ ಮಾಡಬಹುದಾಗಿದೆ. ಇದು ಬಾಹ್ಯಾಕಾಶದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಈ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.ಭವಿಷ್ಯದಲ್ಲಿ ಚಂದ್ರನ ಮೇಲೆ ಶಾಶ್ವತ ಮಾನವ ವಸಾಹತು ಸ್ಥಾಪಿಸುವಲ್ಲಿ ಈ ತಂತ್ರಜ್ಞಾನವು ಬಹಳ ಮುಖ್ಯ ಎಂದು ಸಾಬೀತುಪಡಿಸಬಹುದು ಎಂಬುದು ಗಮನಿಸಬೇಕಾದ ಸಂಗತಿ. ಬ್ಯಾಕ್ಟೀರಿಯಾ ಆಧಾರಿತ ದುರಸ್ತಿ ತಂತ್ರಗಳು ಚಂದ್ರನ ರಚನೆಗಳ ಜೀವಿತಾವಧಿ ಹೆಚ್ಚಿಸಬಹುದು ಮತ್ತು ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಬಹುದು. ಬಾಹ್ಯಾಕಾಶದಲ್ಲಿ ಮಾನವ ವಸಾಹತುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಐಐಎಸ್​ಸಿಯ ಈ ಸಂಶೋಧನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button