ನಗರಸಭೆ
Trending

ಒಕ್ಕಲಿಗ ಶಾಸಕರ ತುರ್ತು ಸಭೆ ಕರೆದ ಡಿ.ಕೆ.ಶಿವಕುಮಾರ್

ಬೆಂಗಳೂರು : ಜಾತಿಗಣತಿ ವರದಿ, ಕಳೆದ ವಾರ ಕ್ಯಾಬಿನೆಟ್ ನಲ್ಲಿ ಮಂಡನೆಯಾದ ನಂತರ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ, ಒಕ್ಕಲಿಗ ಸಮುದಾಯದ ಜನಪ್ರತಿನಿಧಿಗಳ ಸಭೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆದಿದ್ದಾರೆ.ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಜಾತಿಗಣತಿ ವರದಿ ಮಂಡನೆಯಾದ ನಂತರ ಮಾಧ್ಯಮದವರ ಪ್ರಶ್ನೆಗೆ ಡಿಕೆಶಿ, ನೇರವಾಗಿ ಉತ್ತರಿಸಿರಲಿಲ್ಲ. ವರದಿಯಲ್ಲಿ ಏನಿದೆ ಎನ್ನುವುದನ್ನು ನಾನಿನ್ನೂ ಓದಿಲ್ಲ ಎಂದು ಹೇಳಿದ್ದಾರೆ. ಈಗ, ನಾಳೆ (ಏ. 15) ಸಮುದಾಯದ ನಾಯಕರ ಸಭೆಯನ್ನು ಡಿಸಿಎಂ ಕರೆದಿದ್ದಾರೆ.ತಮ್ಮ ಸರ್ಕಾರೀ ನಿವಾಸದಲ್ಲಿ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಚಿವರನ್ನು ಈ ಸಭೆಗೆ ಡಿ.ಕೆ.ಶಿವಕುಮಾರ್ ಆಹ್ವಾನಿಸಿದ್ದಾರೆ. ನಾಳೆ ಸಂಜೆ 6 ಗಂಟೆಗೆ ಈ ಸಭೆ ನಡೆಯಲಿದ್ದು, ವರದಿಯ ಸಾದಕಭಾದಕದ ಸುದೀರ್ಘ ಚರ್ಚೆ ಸಭೆಯಲ್ಲಿ ನಡೆಯಲಿದೆ ಎಂದು ಹೇಳಿದೆ.

ಒಂದು ವೇಳೆ, ಈಗ ಮಂಡನೆಗೊಂಡ ವರದಿಯೇ ಅಂತಿಮಗೊಂಡರೆ ನಮ್ಮ ನಿಲುವೇನಿರಬೇಕು ಎನ್ನುವುದೂ ಸಹ ಚರ್ಚೆಯಾಗುವ ಸಾಧ್ಯತೆಯಿದೆ. ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ತಮ್ಮ ಸಮುದಾಯವನ್ನು (ಲಿಂಗಾಯತ) ಉಳಿಸಿಕೊಳ್ಳಲು ನೋಡುತ್ತಿದ್ದಾರೆ ಎನ್ನುವ ಮಾರ್ಮಿಕ ಉತ್ತರವನ್ನು ಡಿಕೆಶಿ ನೀಡಿದ್ದರು.ಏಪ್ರಿಲ್ 17ರಂದು ಮುಖ್ಯಮಂತ್ರಿಗಳು ವಿಶೇಷ ಕ್ಯಾಬಿನೆಟ್ ಮೀಟಿಂಗ್ ಅನ್ನು ಕರೆದಿದ್ದಾರೆ. ಅದರೊಳಗೆ ತಮ್ಮ ಸಮುದಾಯದ ನಿಲುವು ಏನಿರಬೇಕು ಎನ್ನುವ ಅಂಶವನ್ನು ತಮ್ಮ ಜಾತಿಯ ನಾಯಕರುಗಳಿಂದಲೇ ತಿಳಿದುಕೊಳ್ಳುವ ಪ್ರಯತ್ನದ ಭಾಗವಾಗಿ ಈ ಸಭೆ ನಡೆಯಲಿದೆ.ಈಗಾಗಲೇ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರೂ, ಲಿಂಗಾಯತ ಸಮುದಾಯದ ಜನಸಂಖ್ಯೆ ಒಂದು ಕೋಟಿಗೂ ಮೀರಿದೆ. ಆದರೆ, ಮೀಸಲಾತಿಯನ್ನು ಗಮನದಲ್ಲಿ ಇಟ್ಟುಕೊಂಡು, ಬೇರೆ ಪ್ರವರ್ಗದ ಜೊತೆ ಸೇರಿಸಲಾಗಿದೆ. ಇದನ್ನು ಕ್ಯಾಬಿನೆಟ್ ನಲ್ಲಿ ಪ್ರಶ್ನಿಸುತ್ತೇನೆ ಎಂದು ಸಚಿವರು ಹೇಳಿದ್ದರು.

“ವೀರಶೈವ ಮಹಾಸಭಾದವರು ಅವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದು, ಅವರನ್ನು ನಾವು ಏಕೆ ಟೀಕೆ ಮಾಡಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಪ್ರಕಾರವಾಗಿ ಅವರುಗಳು ತಮ್ಮ ನಿಲುವುಗಳನ್ನು ಪ್ರತಿಪಾದನೆ ಮಾಡಲಿ” ಎಂದು ಡಿ.ಕೆ.ಶಿವಕುಮಾರ್ ಅವರು ಶಾಮನೂರು ಹೇಳಿಕೆಗೆ ಪ್ರತಿಕ್ರಿಯಿಸಿದ್ದರು.ಮುಖ್ಯಮಂತ್ರಿಗಳು ಜಾತಿಗಣತಿ ವರದಿಯ ಬಗ್ಗೆ ಚರ್ಚೆ ನಡೆಸಲು ಜನಪ್ರತಿನಿಧಿಗಳಿಗೂ ವಿಧಾನಸಭೆಯಲ್ಲಿ ಚರ್ಚೆ ನಡೆಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕಿಂತ ಮುಕ್ತವಾಗಿ ಇನ್ನೇನು ‌ಮಾಡಲು ಸಾಧ್ಯ. ಅದು ಬೇರೆ ವಿಚಾರ. ಈಗ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ. ಎಲ್ಲರಿಗೂ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ, ಧ್ವನಿ, ಧ್ಯೇಯ, ಉದ್ದೇಶ, ಸಂಕಲ್ಪ ಎಲ್ಲವೂ ಸಹ ಎಂದು ಉಪ ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ.ಸರ್ಕಾರದ ಜಾತಿಗಣತಿ ವರದಿಗೆ ವೀರಶೈವ ಲಿಂಗಾಯತರು ತೀವ್ರ ವಿರೋಧ ವ್ಯಕ್ತ ಪಡಿಸುವ ಸಾಧ್ಯತೆಯಿದೆ. ಪ್ರತ್ಯೇಕವಾದ ಜಾತಿಗಣತಿಯನ್ನು ನಡೆಸಲು ಸಮುದಾಯದವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸುವ ಸಾಧ್ಯತೆಯಿದೆ.


Related Articles

Leave a Reply

Your email address will not be published. Required fields are marked *

Back to top button