ಕ್ರೀಡೆ
Trending

ಮೂರನೇ ಸೋಲಿಗೆ ಕುಂಟು ನೆಪ ಹೇಳಿದ ರಜತ್ ಪಾಟಿದಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿ ತವರಿನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಸೋತಿದ್ದ ಆರ್​ಸಿಬಿ, ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಮುಗ್ಗರಿಸಿತ್ತು. ಇದೀಗ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಕೂಡ ಸೋಲನುಭವಿಸಿದೆ. ಅದರಲ್ಲೂ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ನಿರಾಶದಾಯಕ ಪ್ರದರ್ಶನ ನೀಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು.ಮಳೆಯ ಕಾರಣ 14 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆರ್​ಸಿಬಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಅಜೇಯ 50 ರನ್ ಬಾರಿಸುವ ಮೂಲಕ ಆರ್​ಸಿಬಿ ತಂಡದ ಸ್ಕೋರ್​ ಅನ್ನು 95 ಕ್ಕೆ ತಂದು ನಿಲ್ಲಿಸಿದರು. ಈ ಸುಲಭ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡವು 12.1 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಗೆಲುವು ದಾಖಲಿಸಿದೆ.ಈ ಸೋಲಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ನಮ್ಮ ಪರಾಜಯಕ್ಕೆ ಪಿಚ್ ಕಾರಣ ಎಂದಿದ್ದಾರೆ. ಏಕೆಂದರೆ ಈ ಪಿಚ್​ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ನಮ್ಮ ಬ್ಯಾಟರ್​ಗಳು ಕಳಪೆ ಪ್ರದರ್ಶನ ನೀಡಿದ್ದಾರೆ.ಇಂತಹ ಪಿಚ್​ನಲ್ಲಿ ಜೊತೆಯಾಟವಾಡುವುದು ಮುಖ್ಯವಾಗಿತ್ತು. ಆದರೆ ನಮ್ಮಿಂದ ಅದು ಸಾಧ್ಯವಾಗಲಿಲ್ಲ. ನಾವು ಬೇಗನೆ ವಿಕೆಟ್​ಗಳನ್ನು ಕಳೆದುಕೊಂಡ ಪರಿಣಾಮ, ಉತ್ತಮ ಜೊತೆಯಾಟ ಮೂಡಿಬಂದಿರಲಿಲ್ಲ. ಇದು ಮುಂಬರುವ ಪಂದ್ಯಗಳೀಗೆ ನಮಗೆ ಪಾಠ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಇನ್ನು ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅವರನ್ನು ಕಣಕ್ಕಿಳಿಸದಿರುವ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ತಂಡದಲ್ಲಿ ಪಡಿಕ್ಕಲ್ ಬದಲಿಗೆ ಬೇರೆಯವನರನ್ನು ಕಣಕ್ಕಿಳಿಸಿದ್ದೆವು. ಆದರೆ ಅದು ಪರಿಣಾಮಕಾರಿಯಾಗಲಿಲ್ಲ ಎಂದರು.ಇದಾಗ್ಯೂ ಪಂಜಾಬ್ ಕಿಂಗ್ಸ್ ವಿರುದ್ಧ ನಮ್ಮ ಬೌಲರ್​ಗಳನ್ನು ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ನಮ್ಮ ಬೌಲಿಂಗ್ ವಿಭಾಗವು ತುಂಬಾ ಚೆನ್ನಾಗಿ ಆಡಿದ್ದರು. ಇದುವೇ ಈ ಪಂದ್ಯದ ನಮ್ಮ ಪ್ಲಸ್ ಪಾಯಿಂಟ್. ಬೌಲಿಂಗ್​ಗೆ ಪಿಚ್ ಕೂಡ ಸಹಕಾರಿಯಾಗಿತ್ತು. ಇದು ಆರಂಭದಲ್ಲಿ ಬೌಲರ್‌ಗಳಿಗೆ ಸಹಾಯ ಮಾಡಿದೆ.ಆದರೆ ನಮ್ಮ ಬೌಲರ್​ಗಳ ವಿರುದ್ಧ ಪಂಜಾಬ್ ಕಿಂಗ್ಸ್ ಬ್ಯಾಟರ್​ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಗೆಲುವಿನ ಕೀರ್ತಿ ಅವರಿಗೆ ಸಲ್ಲುತ್ತದೆ. ವಿಕೆಟ್ ಏನೇ ಇರಲಿ, ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಿ ಗೆಲುವಿನ ಸ್ಕೋರ್ ಗಳಿಸಬೇಕಿತ್ತು. ಮುಂದಿನ ಪಂದ್ಯಕ್ಕೂ ಮುನ್ನ ಬ್ಯಾಟಿಂಗ್ ವಿಭಾಗದಲ್ಲಿನ ಕೆಲವು ತಪ್ಪುಗಳನ್ನು ನಾವು ಸರಿಪಡಿಸಬೇಕಿದೆ ಎಂದು ರಜತ್ ಪಾಟಿದಾರ್ ಇದೇ ವೇಳೆ ಅಭಿಪ್ರಾಯಪಟ್ಟರು.

Related Articles

Leave a Reply

Your email address will not be published. Required fields are marked *

Back to top button