
ಶ್ರೀನಗರ: ಒಂದು ವಾರದ ಹಿಂದಷ್ಟೇ ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್(Pahalgam)ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಕೆಲವು ಪ್ರವಾಸಿಗರು ಅಲ್ಲಿಗೆ ಹೋಗಲು ಹಿಂಜರಿದರೂ ಕೂಡ ಇನ್ನೂ ಹಲವು ಪ್ರವಾಸಿಗರು ಭಯ ಪಡುವ ಅಗತ್ಯವಿಲ್ಲ ಎಂದು ಹೇಳುತ್ತಾ ಧೈರ್ಯವಾಗಿ ಹೋಗಿದ್ದಾರೆ.
ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಈ ಪ್ರದೇಶವು ಮತ್ತೊಮ್ಮೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸ್ವಾಗತಿಸಲು ಪ್ರಾರಂಭಿಸಿದೆ. ಕಳವಳಗಳ ಹೊರತಾಗಿಯೂ, ಅನೇಕರು ಪಹಲ್ಗಾಮ್ ಭೇಟಿ ಸೇರಿದಂತೆ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ತಿಳಿದುಬಂದಿದೆ.ಕಾಶ್ಮೀರ ಈಗ ಸುರಕ್ಷಿತವಾಗಿದೆ, ಎಲ್ಲವೂ ಮುಕ್ತವಾಗಿದೆ, ಪ್ರವಾಸಿಗರು ಸುರಕ್ಷಿತರಾಗಿದ್ದಾರೆ, ಎಲ್ಲರೂ ಬರುತ್ತಿದ್ದಾರೆ, ಆದ್ದರಿಂದ ನಿಮಗೆ ಯೋಜನೆಗಳಿದ್ದರೆ ದಯವಿಟ್ಟು ಬನ್ನಿ ಎಂದು ಕೋಲ್ಕತ್ತಾದ ಪ್ರವಾಸಿಗರೊಬ್ಬರು ಹೇಳಿದ್ದಾರೆ.
ಎಎನ್ಐ ಜತೆ ಮಾತನಾಡಿರುವ ಗುಜರಾತ್ನ ಸೂರತ್ ನಿವಾಸಿ ಮೊಹಮ್ಮದ್ ಅನಸ್ ಮಾತನಾಡಿ, ಪಹಲ್ಗಾಮ್ ಮೊದಲಿನಂತೆಯೇ ಇದೆ. ಚಿಂತಿಸಲು ಏನೂ ಇಲ್ಲ. ಸೈನ್ಯ, ಸರ್ಕಾರ ಮತ್ತು ಸ್ಥಳೀಯರು ನಮ್ಮೊಂದಿಗಿದ್ದಾರೆ ಮತ್ತು ನಮ್ಮ ಸುರಕ್ಷತೆಯನ್ನು ಖಚಿತಪಡಿಸಿದ್ದಾರೆ. ಘಟನೆಯ ನಂತರ ನಾವು ಭಯಭೀತರಾಗಿದ್ದೆವು, ನಾವು ತಕ್ಷಣ ಹೊರಡಲು ಬಯಸಿದ್ದೆವು, ಆದರೆ ಸ್ಥಳೀಯರು ಮತ್ತು ಸೈನ್ಯವು ನಮಗೆ ಪ್ರೇರಣೆ ನೀಡಿತು ಮತ್ತು ನಾವು ನಮ್ಮ ಪ್ರಯಾಣವನ್ನು ಮುಂದುವರಿಸಿದೆವು ಎಂದು ಅವರು ಹೇಳಿದ್ದಾರೆ.
ದಾಳಿಯ ನಂತರ ವಿದೇಶಿ ಪ್ರಜೆಗಳು ಸಹ ಭಯ ಅಥವಾ ಅನನುಕೂಲತೆಯನ್ನು ಅನುಭವಿಸಲಿಲ್ಲ ಎಂದು ಹೇಳಿದ್ದಾರೆ. ನಾವು 3-4 ದಿನಗಳಿಂದ ಇಲ್ಲಿದ್ದೇವೆ ಮತ್ತು ನಾವು ತುಂಬಾ ಸುರಕ್ಷಿತವಾಗಿದ್ದೇವೆ ಎಂದು ಭಾವಿಸುತ್ತೇವೆ. ನಿಮ್ಮ ದೇಶವು ತುಂಬಾ ಸುಂದರವಾಗಿದೆ, ಮತ್ತು ನಮಗೆ ಯಾವುದೇ ಸಮಸ್ಯೆಗಳಿಲ್ಲ.
ಕಾಶ್ಮೀರ ಸುಂದರ ಮತ್ತು ಸುರಕ್ಷಿತವಾಗಿದೆ ಎಂದು ವಿದೇಶಿ ಪ್ರಜೆಯೊಬ್ಬರು ಹೇಳಿದ್ದಾರೆ. ಅವರ ಪ್ರಕಾರ ಪಹಲ್ಗಾಮ್‌ನಂತಹ ಘಟನೆಗಳು ಎಲ್ಲಿ ಬೇಕಾದರೂ ಸಂಭವಿಸಬಹುದು. ರಾಜ್ಯದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬೀಳುವ ಭೀತಿಯಿಂದ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರವಾಸಿಗರು ಕಾಶ್ಮೀರಕ್ಕೆ ಹೋಗುವುದನ್ನು ತಪ್ಪಿಸದಂತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು .