
‘‘ಅಯ್ಯೋ ಪುಟಿನ್ಗೇನಾದ್ರೂ ಹುಚ್ಚು ಹಿಡಿದಿದ್ಯಾ’’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಪ್ರಶ್ನಿಸಿದ್ದಾರೆ. ಉಕ್ರೇನ್ನ ಕೈವ್ ಮತ್ತು ಇತರೆ ನಗರಗಳ ಮೇಲೆ ರಷ್ಯಾ ಸತತ ಮೂರನೇ ದಿನವೂ ಡ್ರೋನ್ ಮತ್ತು ಕ್ಷಿಪಣಿ ದಾಳಿ ಮುಂದುವರೆಸಿದ್ದಕ್ಕೆ ಟ್ರಂಪ್ ಪುಟಿನ್ರನ್ನು ಕಟುವಾಗಿ ಟೀಕಿಸಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಾನು ಯಾವಾಗಲೂ ಉತ್ತಮ ಸಂಬಂಧವನ್ನು ಹೊಂದಿದ್ದೇನೆ.ಆದರೆ ಅವರಿಗೆ ಈಗ ಏನೋ ಆಗಿದೆ.ಅವರಿಗೆ ಹುಚ್ಚು ಹಿಡಿದಂತಿದೆ. ಪುಟಿನ್ ಅನಗತ್ಯವಾಗಿ ಹೆಚ್ಚಿನ ಸಂಖ್ಯೆಯ ಜನರನ್ನು ಕೊಲ್ಲುತ್ತಿದ್ದಾರೆ. ಉಕ್ರೇನ್ ಮೇಲೆ ರಷ್ಯಾದಿಂದ ದಾಳಿಗಳು ನಿರಂತರವಾಗಿ ಹೆಚ್ಚುತ್ತಿದ್ದು, ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೆರಳಿಸಿದೆ. ಅಧ್ಯಕ್ಷ ಟ್ರಂಪ್ ಅವರು ಪುಟಿನ್ ಅವರ ಬಗ್ಗೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಉಕ್ರೇನ್ ನಗರಗಳ ಮೇಲೆ ವಿನಾಕಾರಣ ಕ್ಷಿಪಣಿಗಳು ಮತ್ತು ಡ್ರೋನ್ಗಳಿಂದ ದಾಳಿ ಮಾಡಲಾಗುತ್ತಿದೆ ಎಂದರು.ಪುಟಿನ್ ಇಡೀ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಬಯಸಿದರೆ, ಅದು ರಷ್ಯಾದ ಪತನಕ್ಕೆ ಕಾರಣವಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.ಝೆಲೆನ್ಸ್ಕಿ ಬಾಯಿಂದ ಹೊರಬರುವ ಎಲ್ಲವೂ ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಅದನ್ನು ನಿಲ್ಲಿಸಲೇಬೇಕು. ಮೂರು ವರ್ಷಗಳ ಯುದ್ಧ ಇನ್ನೂ ಕೊನೆಗೊಳ್ಳದಿರುವ ಬಗ್ಗೆ ಅಧ್ಯಕ್ಷ ಟ್ರಂಪ್ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ತಾವು ಮತ್ತೆ ಅಧಿಕಾರಕ್ಕೆ ಬಂದರೆ, ಈ ಯುದ್ಧವನ್ನು ಬೇಗನೆ ಕೊನೆಗೊಳಿಸುವುದಾಗಿ ಅವರು ತಮ್ಮ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಭರವಸೆ ನೀಡಿದ್ದರು.
ಟ್ರಂಪ್ ಬಹಳ ಹಿಂದಿನಿಂದಲೂ ಪುಟಿನ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆಂದು ಹೇಳಿಕೊಳ್ಳುತ್ತಿದ್ದಾರೆ ಮತ್ತು ಉಕ್ರೇನ್ ಗಿಂತ ರಷ್ಯಾ ಶಾಂತಿ ಒಪ್ಪಂದಕ್ಕೆ ಬರಲು ಹೆಚ್ಚು ಇಚ್ಛಿಸುತ್ತದೆ ಎಂದು ಹೇಳುತ್ತಲೇ ಬಂದಿದ್ದಾರೆ.ಆದರೆ ಕಳೆದ ತಿಂಗಳು ರಷ್ಯಾ ಉಕ್ರೇನ್ ಮೇಲೆ ಮಾರಕ ದಾಳಿ ನಡೆಸಿದಾಗ ಟ್ರಂಪ್ ದಾಳಿಯನ್ನು ನಿಲ್ಲಿಸುವಂತೆ ಪುಟಿನ್ಗೆ ಮನವಿ ಮಾಡಿದ್ದರು. ರಷ್ಯಾದ ದಾಳಿಯಿಂದ ಝೆಲೆನ್ಸ್ಕಿ ಹತಾಶೆಗೊಂಡಿರುವುದು ಸಹಜ. ಜನವರಿ 20 ರವರೆಗೆ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತಿದ್ದ ಅಮೆರಿಕ, ಈಗ ಮಿಲಿಟರಿ ಸಹಾಯವನ್ನು ಹಿಂತೆಗೆದುಕೊಳ್ಳುತ್ತಿದೆ.30 ದಿನಗಳ ಕದನ ವಿರಾಮಕ್ಕಾಗಿ ರಷ್ಯಾವನ್ನು ಒತ್ತಾಯಿಸುತ್ತಿರುವ ಯುರೋಪಿಯನ್ ಒಕ್ಕೂಟ ಮತ್ತು ಬ್ರಿಟನ್ ಇತ್ತೀಚೆಗೆ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿವೆ. ಆದರೆ ಹೊಸ ನಿರ್ಬಂಧಗಳನ್ನು ವಿಧಿಸುವಲ್ಲಿ ಅವರಿಗೆ ಬೆಂಬಲ ನೀಡಲು ಅಮೆರಿಕ ಅಧ್ಯಕ್ಷ ಟ್ರಂಪ್ ನಿರಾಕರಿಸಿದ್ದಾರೆ.