ನಮ್ಮ ಗೆಳೆಯರ ನಡುವೆ ಕಾಶ್ಮೀರಕ್ಕಾಗಿ ಒಂದು ಸಾವಿರ ವರ್ಷಗಳಿಂದ ಹೋರಾಟ; ಇತಿಹಾಸದ ಪುಟ ತೆರೆದ ಡೊನಾಲ್ಡ್ ಟ್ರಂಪ್!

ವಾಷಿಂಗ್ಟನ್ ಡಿಸಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಕಾಶ್ಮೀರಕ್ಕಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಏನಿಲ್ಲವೆಂದರೂ ಒಂದು ಸಾವಿರ ವರ್ಷಗಳಿಂದ ಹೋರಾಟ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಇತ್ತೀಚಿಗೆ ನಿಧನರಾದ ಕ್ರಿಶ್ಚಿಯನ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರೋಮ್‌ಗೆ ತೆರಳುವುದಕ್ಕೂ ಮೊದಲು, ಏರ್‌ಫೋರ್ಸ್ ಒನ್‌ನಲ್ಲಿ ಡೊನಾಲ್ಡ್ ಟ್ರಂಪ್ ಪತ್ರಕರ್ತರೊಂದಿಗೆ ಮಾತನಾಡಿದರು.
“ನಾನು ಭಾರತಕ್ಕೆ ತುಂಬಾ ಹತ್ತಿರವಾಗಿದ್ದೇನೆ ಮತ್ತು ಪಾಕಿಸ್ತಾನಕ್ಕೂ ತುಂಬಾ ಹತ್ತಿರವಾಗಿದ್ದೇನೆ. ಈ ಎರಡೂ ರಾಷ್ಟ್ರಗಳು ನಮಗೆ ಗೆಳೆಯರಾಗಿದ್ದು, ಕಾಶ್ಮೀರ ವಿಷಯದಲ್ಲಿ ಪರಸ್ಪರ ಹೋರಾಡುತ್ತಿರುವುದು ನೋವಿನ ಸಂಗತಿ” ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
“ನಮ್ಮ ಗೆಳೆಯರು ಏನಿಲ್ಲವೆಂದರೂ ಒಂದು ಸಾವಿರ ವರ್ಷಗಳಿಂದ ಕಾಶ್ಮೀರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಬಹುಶ: ಈ ಕಾಶ್ಮೀರ ಹೋರಾಟ ಅದಕ್ಕಿಂತಲೂ ಹಳೆಯದು. ಆ ವಿವಾದಾತ್ಮಕ ಗಡಿಯಲ್ಲಿ 1,500 ವರ್ಷಗಳಿಂದ ಉದ್ವಿಗ್ನತೆ ಇದೆ” ಎಂದು ಅಮೆರಿಕ ಅಧ್ಯಕ್ಷರು ಸೂಚ್ಯವಾಗಿ ಹೇಳಿದರು.
ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲಿನ ಈ ಹಿಂದಿನ ಮುಸ್ಲಿಂ ದೊರೆಗಳ ದಾಳಿಗಳನ್ನು ಉಲ್ಲೇಖಿಸಿ, ಒಂದು ಸಾವಿರ ವರ್ಷಗಳಿಂದ ಕಾಶ್ಮೀರಕ್ಕಾಗಿ ಹೋರಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ. ಮೊಘಲ್ ಮತ್ತು ಅದಕ್ಕಿಂತ ಹಿಂದಿನ ರಾಜಮನೆತನಗಳ ಭಾರತ ದಂಡಯಾತ್ರೆ ಸಮಯದಿಂದಲೂ ಕಾಶ್ಮೀರ ವಿವಾದ ಜೀವಂತವಾಗಿದೆ ಎಂಬುದು ಡೊನಾಲ್ಡ್ ಟ್ರಂಪ್ ಅವರ ಮಾತಿನ ಅರ್ಥವಾಗಿದೆ.
“ಕಾಶ್ಮೀರ ವಿವಾದ ಇಂದಲ್ಲ ನಾಳೆ ಖಂಡಿತವಾಗಿಯೂ ಪರಿಹಾರ ಕಾಣಲಿದೆ ಎಂದು ನನಗೆ ಖಚಿತವಾಗಿ ಗೊತ್ತಿದೆ. ಆದರೆ ಈ ಪರಿಹಾರ ಮಾರ್ಗ ಯಾವುದು ಎಂಬುದನ್ನು ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳೇ ನಿರ್ಧರಿಸಬೇಕು. ಆದರೆ ಹಿಂಸಾ ಮಾರ್ಗದಲ್ಲಿ ಇದಕ್ಕೆ ಪರಿಹಾರ ಹುಡುಕುವುದರಲ್ಲಿ ಅರ್ಥವಿಲ್ಲ” ಎಂದು ಅಮೆರಿಕ ಅಧ್ಯಕ್ಷರು ಸಲಹೆ ನೀಡಿದ್ದಾರೆ.
“ಪಾಕಿಸ್ತಾನ ಮತ್ತು ಭಾರತದ ನಡುವೆ ಮೊದಲಿನಿಂದಲೂ ದೊಡ್ಡ ಉದ್ವಿಗ್ನತೆ ಇದೆ. ಇದು ಈಗಲೂ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ಇದಕ್ಕೆ ತಾಜಾ ಉದಾಹರಣೆ. ಈ ಉದ್ವಿಗ್ನತೆ ಕಡಿಮೆಯಾಗಬೇಕು ಎಂಬುದು ನಮ್ಮ ನಿಲುವು” ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದರು.
ಇನ್ನು ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಶಮನಗೊಳಿಸಲು ನೀವು ಮಧ್ಯಸ್ಥಿಕೆವಹಿಸಲು ಸಿದ್ಧರಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ನೇರವಾಗಿ ಉತ್ತರಿಸದ ಡೊನಾಲ್ಡ್ ಟ್ರಂಪ್, “ಭಾರತ ಮತ್ತು ಪಾಕಿಸ್ತಾನಗಳೆರಡೂ ನಮ್ಮ ಮಿತ್ರರಾಷ್ಟ್ರಗಳು. ಈ ವಿಚಾರದಲ್ಲಿ ಅವರು ಸೂಕ್ತ ಹೆಜ್ಜೆ ಇಡಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಚುಟುಕಾಗಿ ಉತ್ತರಿಸಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ದಿನವೇ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಗ್ರ ದಾಳಿಯನ್ನು ಖಂಡಿಸಿದ್ದರು. ಅಲ್ಲದೇ ದಾಳಿಯಲ್ಲಿ ಮೃತಪಟ್ಟ ಕುಟುಂಬಸ್ಥರ ನೋವಿನಲ್ಲಿ ಅಮೆರಿಕನ್ನರು ಭಾಗಿಯಾಗಿರುವುದಾಗಿ ಟ್ರಂಪ್ ತಿಳಿಸಿದ್ದರು.